ಅನ್ನದಾತ ದೇವರ ಸಮಾನ, ರೈತರು ಈ ದೇಶದ ಬೆನ್ನೆಲುಬು, ಪ್ರತಿಯೊಬ್ಬರೂ ಊಟ ಮಾಡುವಾಗ ರೈತರಿಗೂ ನಮಿಸಬೇಕು ಎಂದ ಅವರು, ತಾಲೂಕಿನಲ್ಲಿ ರೈತರಿಗೆ ಕೃಷಿ ಸಮಾಜದಿಂದ ರೈತ ಭವನ ನಿರ್ಮಾಣ ಮಾಡಲು ಶಾಸಕ ಶರತ್ ಬಚ್ಚೇಗೌಡರಿಗೆ ಮನವಿ ನೀಡಲಾಗಿತ್ತು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಪ್ರತಿ ಗ್ರಾಮಲ್ಲಿರುವ ಪ್ರಗತಿಪರ ರೈತರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವುದರ ಜೊತೆ ಅವರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ರೈತರ ಸರ್ವತೋಮುಖ ಅಭಿವೃದ್ಧಿಗೆ ಕೃಷಿ ಸಮಾಜ ನಿರಂತರ ಕೆಲಸ ಮಾಡಲಿದೆ ಎಂದು ತಾಲೂಕು ಕೃಷಿ ಸಮಾಜದ ಅಧ್ಯಕ್ಷ ವಿ.ಹರೀಶ್ ಕುಮಾರ್ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ದಿ. ಚರಣ್ ಸಿಂಗ್ ರವರ ಸ್ಮರಣಾರ್ಥ ಆಚರಿಸುವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನ್ನದಾತ ದೇವರ ಸಮಾನ, ರೈತರು ಈ ದೇಶದ ಬೆನ್ನೆಲುಬು, ಪ್ರತಿಯೊಬ್ಬರೂ ಊಟ ಮಾಡುವಾಗ ರೈತರಿಗೂ ನಮಿಸಬೇಕು ಎಂದ ಅವರು, ತಾಲೂಕಿನಲ್ಲಿ ರೈತರಿಗೆ ಕೃಷಿ ಸಮಾಜದಿಂದ ರೈತ ಭವನ ನಿರ್ಮಾಣ ಮಾಡಲು ಶಾಸಕ ಶರತ್ ಬಚ್ಚೇಗೌಡರಿಗೆ ಮನವಿ ನೀಡಲಾಗಿತ್ತು. ಅದರಂತೆ ತಾಲೂಕಿನ ಗೊಣಕನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಎಪಿಎಂಸಿ ಯಾರ್ಡ್ ನಲ್ಲಿ ಸುಮಾರು 20 ಗುಂಟೆ ಜಾಗ ಹಾಗೂ ಸರ್ಕಾರದ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಬಿ.ಎನ್. ಗೋಪಾಲಗೌಡ ಮಾತನಾಡಿ, ಸ್ವಾತಂತ್ರ್ಯ ವೇಳೆ ದೇಶದಲ್ಲಿ ಆಹಾರ ಕೊರತೆ ಇತ್ತು, ಅಮೆರಿಕಾದಿಂದ ಜೋಳ ತರಿಸಿ, ಅದರಿಂದ ಆಹಾರ ತಯಾರಿಸಿ ತಿನ್ನುವ ಸಂದರ್ಭ ಎದುರಾಗಿತ್ತು. ಆದರೆ ಇಂದು ನಮ್ಮ ದೇಶದಲ್ಲಿ ಬೆಳೆಯುವ ಧಾನ್ಯ ಹಾಗೂ ಆಹಾರ ಪದಾರ್ಥಗಳನ್ನು ಬೇರೆ ದೇಶಕ್ಕೆ ರಪ್ತು ಮಾಡುವ ಸ್ಥಿತಿಯಲ್ಲಿದ್ದೇವೆ, ಅದಕ್ಕೆಲ್ಲಾ ಕಾರಣ ನಮ್ಮ ದೇಶದ ವಿಜ್ಞಾನಿಗಳು ಹಾಗೂ ರೈತರು, ಆದರೂ ಉತ್ತಮ ಬೆಳೆ ಬೆಳೆದರೂ ರೈತರ ಬಾಳು ಹಸನಾಗದೆ, ಬೆಳೆಗೆ ಸೂಕ್ತ ಬೆಲೆ ದೊರೆಯದೆ ಇಂದಿಗೂ ಮಧ್ಯವರ್ತಿಗಳ ಕೈಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್.ಸುರೇಶ್‌ಗೌಡ ಮಾತನಾಡಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಾವಯವ ಕೃಷಿಗೆ ಒತ್ತು ನೀಡಿದಲ್ಲಿ ಆರೋಗ್ಯಕರ ಬೆಳೆ ಜೊತೆಗೆ ಭೂಮಿಯನ್ನು ಫಲವತ್ತಾಗಿಡಲು ಸಾಧ್ಯ ಎಂದ ಅವರು, ಕೃಷಿ ಜೊತೆಗೆ ಹೈನುಗಾರಿಕೆಗೆ, ಅಣಬೆ ಬೆಳೆಯಂತಹ ಉಪ ಬೆಳೆಗಳ ಬಗ್ಗೆ ರೈತರು ಒಲವು ತೋರಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಬಿಎಂಆರ್‌ಡಿಎ ಸದಸ್ಯ ಕೊರಳೂರು ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಚ್ಚೇಗೌಡ, ಕೃಷಿ ಸಮಾಜದ ಉಪಾಧ್ಯಕ್ಷ ಪ್ರಕಾಶ್, ಜಿಲ್ಲಾ ಪ್ರತಿನಿಧಿ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ನಾರಾಯಣಗೌಡ, ಖಜಾಂಚಿ ಸೋಮಶೇಖರ್, ನಿರ್ದೇಶಕರಾದ ವಸಂತ್, ಶಂಕರ್ ನಾರಾಯಣ್, ಮುನಿರಾಜ್, ರಘು, ರವಿ ಕುಮಾರ್, ಮುನಿಶಾಮಪ್ಪ, ಕೆಂಚೇಗೌಡ, ಶ್ರೀನಿವಾಸ್, ಶಶಿಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇಣುಕಾ ಪ್ರಸನ್ನ ಸೇರಿ ಹಲವು ಮುಖಂಡರು ಹಾಗೂ ರೈತರು ಹಾಜರಿದ್ದರು.