ಪ್ರಾಕೃತಿಕ ಹಾಗೂ ಐತಿಹಾಸಿಕವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಜಿಲ್ಲೆ ಶಿವಮೊಗ್ಗ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ: ಪ್ರಾಕೃತಿಕ ಹಾಗೂ ಐತಿಹಾಸಿಕವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಜಿಲ್ಲೆ ಶಿವಮೊಗ್ಗ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅವರು ಮಾತನಾಡಿದರು.
ಭಾರತದಲ್ಲಿಯೇ ಕರ್ನಾಟಕ ರಾಜ್ಯವು ಶಿಲ್ಪಕಲೆ, ಐತಿಹಾಸಿಕ ಪ್ರದೇಶಗಳು, ಪ್ರಕೃತಿದತ್ತ ಕೊಡುಗೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೆಟ್ಟ, ಗುಡ್ಡ, ನದಿ ತೊರೆಯಿಂದ ಶಿವಮೊಗ್ಗ ಜಿಲ್ಲೆ ಅತ್ಯಂತ ಶ್ರೀಮಂತವಾಗಿದೆ. ಇದರಿಂದ ಇಲ್ಲಿಯೂ ಪ್ರವಾಸಕ್ಕೆ ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.ಪ್ರಾದೇಶಿಕವಾಗಿ ನಗರಗಳು ಅಭಿವೃದ್ಧಿ ಹೊಂದಲು ಪ್ರವಾಸೋದ್ಯಮ ಹೆಚ್ಚಿನ ಆರ್ಥಿಕ ನೆರವು ನೀಡುತ್ತದೆ. ಇದರಿಂದ ಹಲವಾರು ರೀತಿಯ ನೆರವು ಹರಿದು ಬರುವುದರಿಂದ, ಗುಡಿ ಕೈಗಾರಿಕೆ, ಹೋಟೆಲ್ ಉದ್ಯಮ, ಸ್ಥಳಿಯ ಆಹಾರ, ಪ್ರವಾಸಿ ವಾಹನಗಳಿಗೆ ನೇರವಾಗಿ ಸಹಾಯ ದೊರಕುತ್ತದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಡಿ.ಎಸ್.ಶಂಕರಪ್ಪ, ಮೂರು ವರ್ಷ ಬಹಳ ಸಹಕಾರ ಕೊಟ್ಟು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಅಂಡಮಾನ್, ಶ್ರೀಲಂಕ, ಹಿಮಾಲಯ ಚಾರಣಗಳನ್ನು ಆಯೋಜಿಸಿದ್ದೇವೆ. ಸರ್ಕಾರದ ವತಿಯಿಂದ ವೀಕ್‌ಎಂಡ್ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದಾಗ ಜಿಲ್ಲಾಧಿಕಾರಿಗಳು ವೇದಿಕೆಯಿಂದ ಪ್ರಾರಂಭಿಸಿದಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದರು. ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ಅವರ ಸಹಕಾರದಿಂದ ಸತತವಾಗಿ ನಾಲ್ಕು ಭಾನುವಾರ ಬಹಳ ಕಡಿಮೆ ಖರ್ಚಿನಲ್ಲಿ ಪ್ರವಾಸ ಏರ್ಪಡಿಲಾಗಿತ್ತು ಎಂದು ತಿಳಿಸಿದರು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅ.ನಾ.ವಿಜಯೇಂದ್ರ ರಾವ್ ಮಾತನಾಡಿ, ಪ್ರಾರಂಭದಲ್ಲಿ ಉತ್ತಮ ಆರಂಭ ಕಂಡ ನಮ್ಮ ವೇದಿಕೆ ನಂತರ ಸ್ವಲ್ಪ ಹಿನ್ನೆಡೆಗೆ ಬಂದಾಗ ಅಧಿಕಾರ ವಹಿಸಿಕೊಂಡ ಶಂಕರಪ್ಪ ಅವರು ಅತ್ಯುತ್ತಮ ಕಾರ್ಯ ಮಾಡಿ ಮುನ್ನಡೆಸಿದ್ದಾರೆ. ಇನ್ನೂ ಅನೇಕ ಕಡೆಗೆ ಪ್ರವಾಸ ಏರ್ಪಡಿಸಿ ಯಾವುದೆ ಲಾಭ ಗಳಿಕೆ ಪಡೆಯದೆ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆಯ ಹಾಗೂ ಅತ್ಯಂತ ಕಡಿಮೆ ದರದಲ್ಲಿ ಪ್ರವಾಸವನ್ನು ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಕಾರ್ಯಕ್ರಮ ಹಮ್ಮಿಕೊಳ್ಳುವ ಅಭಿಲಾಷೆಯನ್ನು ಹೊಸ ಅಧ್ಯಕ್ಷರು ಹೊಂದಿದ್ದಾರೆ. ಅವರಿಗೆ ಉತ್ತಮ ಸಹಕಾರವನ್ನು ಹೊಸ ಆಡಳಿತ ಮಂಡಳಿ ನೀಡುವುದಾಗಿ ತಿಳಿಸಿದರು.ಹೊಸ ಆಡಳಿತ ಮಂಡಳಿಯ ಆಯ್ಕೆಯನ್ನು ವಸಂತ್ ಹೋಬಳಿದಾರ್ ಘೋಷಿಸಿದರು. ಅಧ್ಯಕ್ಷರಾಗಿ ಎನ್.ಗೋಪಿನಾಥ್, ಕಾರ್ಯದರ್ಶಿಯಾಗಿ ಜಿ.ವಿಜಯಕುಮಾರ್ ಸಹಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಖಚಾಂಚಿ ನಿರ್ಮಲ ಕಾಶಿ, ನಿರ್ದೇಶಕರಾಗಿ ಲಕ್ಷ್ಮೀ ನಾಗೇಶ್, ಪ್ರೇಮ ಹೆಗ್ಡೆ, ಮಲ್ಲಿಕಾರ್ಜುನ್ ಕಾನೂರ್, ರವೀಂದ್ರ, ಮನೋಹರ್ ಆಯ್ಕೆಯಾದರು.
ಯೂತ್ ಹಾಸ್ಟೆಲ್ಸ್ ತರುಣೋಣದಯ ಘಟಕ, ಶಿವಮೊಗ್ಗ ಸೈಕಲ್ ಕ್ಲಬ್, ಬೈಕ್ ಕ್ಲಬ್, ಇತಿಹಾಸ ವೇದಿಕೆ ಅಧ್ಯಕ್ಷ, ಕಾರ್ಯದರ್ಶಿ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಹ್ವಾನಿತರಾಗಿದ್ದಾರೆ. ದಿಲೀಪ್ ನಾಡಿಗ್ ಸ್ವಾಗತಿಸಿದರು. ಉಷಾ ಪ್ರಾರ್ಥಿಸಿದರು. ಮಹದೇವಸ್ವಾಮಿ ವಂದಿಸಿದರು.