ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಿಕ್ಷಣದ ಜತೆಗೆ ಕ್ರೀಡೆ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಹೇಳಿದರು.ತಾಲೂಕಿನ ಜಯಂತಿ ನಗರದಲ್ಲಿರುವ ಶ್ರೀಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಅವಿಭಾಜ್ಯ ಅಂಗವಾಗಬೇಕು. ಕ್ರೀಡೆ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಿ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಓದಿದ ಶಾಲಾ-ಕಾಲೇಜು, ಪೋಷಕರಿಗೆ ಕೀರ್ತಿ ತರುವ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳು ಇದೇ ದಾರಿಯಲ್ಲಿ ನಡೆಯಬೇಕು ಎಂದರು.ಕೂಲಿ ಮಾಡುವಂತಹ ಜನರು ಸಹ ತಮ್ಮ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ಓದಿಸಬೇಕೆಂದು ಕಷ್ಟಪಡುತ್ತಾರೆ. ಆದರೆ, ಮಕ್ಕಳು ಇವುಗಳನ್ನು ಅರ್ಥ ಮಾಡಿಕೊಳ್ಳದೆ ಪ್ರೀತಿ, ಪ್ರೇಮ ಹಾಗೂ ದುಶ್ಚಟಗಳಿಗೆ ಒಳಗಾಗಿ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆ ಚಟಕ್ಕೆ ಒಳಗಾಗಿತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಮತ್ತು ಕ್ರೀಡೆ ಎರಡು ಸಹ ಸೂರ್ಯ, ಚಂದ್ರ ಇದ್ದಂತೆ. ವಿದ್ಯಾರ್ಥಿಗಳು ವಿದ್ಯೆ ಮತ್ತು ಕ್ರೀಡೆಯನ್ನು ಸಮಾನವಾಗಿ ತೆಗೆದುಕೊಂಡು ಮುನ್ನಡೆದರೆ ಇವೇ ನಿಮಗೆ ಭಾರತ ರತ್ನವಾಗಲಿವೆ ಎಂದರು.ದೇಶವನ್ನಾಳುವ ಸರ್ಕಾರಗಳು ಹಾಗೂ ಸಮಾಜ ಕ್ರೀಡೆಗೆ ಹೆಚ್ಚು ಹೊತ್ತು ನೀಡಬೇಕು, ಕ್ರೀಡಾಪಟುಗಳು, ವಿಕಲಚೇತನರ ಬಗ್ಗೆ ಅನುಕಂಪ ತೋರುವ ಬದಲು ಅವಕಾಶವನ್ನು ಕಲ್ಪಿಸಿಕೊಡುವ ಕೆಲಸ ಮಾಡಬೇಕು. ಕ್ರೀಡೆ ವಿಶ್ವದ ದೊಡ್ಡ ಆಸ್ತಿಯಾಗಿದೆ. ಶಿಕ್ಷಣದಲ್ಲಿ ಹಿಂದೆ ಉಳಿದಿರುವ ಸಾಕಷ್ಟು ಮಂದಿ ಕ್ರೀಡೆಯ ಮೂಲಕ ಸಾಧನೆಗಳಿಸಿದ್ದಾರೆ ಎಂದರು.
ಪದ್ಮಶ್ರೀ ಪ್ರಶಸ್ತಿಗಳು ಹಿಂದೆ ಹಣವಂತರಿಗೆ ದೊರೆಯುತ್ತಿದ್ದವು. ಆದರೀಗ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಮಾಜ ಸೇವೆ ಸೇರಿದಂತೆ ಹಲವು ಸೇವೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಗೌರವ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.ತಹಸೀಲ್ದಾರ್ ಸಂತೋಷ್ ಮಾತನಾಡಿದರು. ಕ್ರೀಡಾಕೂಟದಲ್ಲಿ ಜಿಲ್ಲೆಯ ಏಳು ತಾಲೂಕುಗಳಿಂದಲೂ 1600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಉಪ ನಿರ್ದೇಶಕ ಸಿ.ಚಲುವಯ್ಯ, ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಶಂಭುಲಿಂಗೇಗೌಡ ಟ್ರಸ್ಟ್ ಅಧ್ಯಕ್ಷ ಪಿ.ಹೊನ್ನರಾಜು, ಮ್ಯಾನೆಜಿಂಗ್ ಟ್ರಸ್ಟಿ ಪ್ರೊ.ಎಂ.ಪಂಚಲಿಂಗೇಗೌಡ, ಕಾರ್‍ಯದರ್ಶಿ ಪಿ.ಅಕ್ಷಯ್, ಟ್ರಸ್ಟಿ ಪಿ.ಧನರಾಜ್, ಪ್ರಾಂಶುಪಾಲ ಆರ್.ವಿ.ಸೌಮ್ಯ, ಬಿಇಒ ರವಿಕುಮಾರ್, ಪ್ರಾಂಶುಪಾರ ಸಂಘದ ಅಧ್ಯಕ್ಷ ನಟರಾಜು, ಕಾರ್‍ಯದರ್ಶಿ ಕಾಂತರಾಜು, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಚನ್ನಕೃಷ್ಣಯ್ಯ, ತಾಲೂಕುಅಧ್ಯಕ್ಷ ರಾಮಕೃಷ್ಣೇಗೌಡ, ದೈಹಿಕ ಪರಿವೀಕ್ಷಕ ಮಾದೇಶ್, ಯೋಗೇಶ್, ದೈಹಿಕ ಶಿಕ್ಷಕ ರಮ್ಯ, ಮಹೇಶ್, ಸಂಯೋಜಕರಾದ ಗುರುಸ್ವಾಮಿ, ಮರಿಗೌಡ, ಕಾಂಗ್ರೆಸ್ ಮುಖಂಡ ಕೆ.ಕುಬೇರ, ಬಿ.ಜೆ.ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.