ಮುಂಡರಗಿ ಪಟ್ಟಣದ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಜ. ಅನ್ನದಾನೀಶ್ವರ ಜಾತ್ರಾ ಮಹೋತ್ಸವ, ಜ.ಅ. ವಿದ್ಯಾ ಸಮಿತಿ ಶತಮಾನೋತ್ಸವದ ಅಂಗವಾಗಿ ತಾಲೂಕಿನ ಕಬಡ್ಡಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಮುಂಡರಗಿ: ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಪಟ್ಟಣದ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಜ. ಅನ್ನದಾನೀಶ್ವರ ಜಾತ್ರಾ ಮಹೋತ್ಸವ, ಜ.ಅ. ವಿದ್ಯಾ ಸಮಿತಿ ಶತಮಾನೋತ್ಸವದ ಅಂಗವಾಗಿ ತಾಲೂಕಿನ ಕಬಡ್ಡಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮುಂಡರಗಿ ತಾಲೂಕಿನ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಕೀರ್ತಿ ತಂದಿದ್ದಾರೆ. ತಾಲೂಕಿನಲ್ಲಿ ಎಲೆಮರೆ ಕಾಯಿಯಂತಿರುವ ಪ್ರತಿಭಾವಂತ ಕ್ರೀಡಾಪಟುಗಳ ಉತ್ತಮ ಅವಕಾಶಗಳಿಗಾಗಿ ಈ ಆಯ್ಕೆ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಕಬಡ್ಡಿ ದೇಶಿಯ ಕ್ರೀಡೆಯಾಗಿದ್ದು, ಇದಕ್ಕೆ ಕೇವಲ ದೈಹಿಕ ಶಕ್ತಿ ಮಾತ್ರವಲ್ಲ, ಯುಕ್ತಿಯಿಂದಲೂ ಆಡಬೇಕಾಗುತ್ತದೆ. ಇದನ್ನು ಕಬಡ್ಡಿ ಪಟುಗಳು ಅರಿಯಬೇಕು ಎಂದರು.ಪತ್ರಕರ್ತ ಸಿ.ಕೆ. ಗಣಪ್ಪನವರ ಮಾತನಾಡಿ, ದೇಶಿಯ ಕ್ರೀಡೆಯಾದ ಕಬಡ್ಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಹತ್ವ ಪಡೆದಿದ್ದು, ಕ್ರೀಡಾಪಟುಗಳಿಗೆ ಕಬಡ್ಡಿ ಕೇವಲ ಒಂದು ಆಟವಾಗಿರದೆ, ಅವರ ಮುಂದಿನ ಭವಿಷ್ಯಕ್ಕೆ ಉದ್ಯೋಗ ಅವಕಾಶ ಕಲ್ಪಿಸಿಕೊಡಲು ಸಹಾಯವಾಗುತ್ತದೆ ಎಂದರು.ಭಗತಸಿಂಗ್ ಕಬಡ್ಡಿ ತಂಡ ಹಾಗೂ ಪ್ರೀಮಿಯರ್ ಲೀಗ್ ಸಂಘಟಕ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ದೇಶಿಯ ಕ್ರೀಡೆ ಕಬಡ್ಡಿ ಪಂದ್ಯಾವಳಿಗೆ ಜ.ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರು ಸೇರಿದಂತೆ ಪಟ್ಟಣದ ಅನೇಕ ಹಿರಿಯರು, ಕ್ರೀಡಾಭಿಮಾನಿಗಳು ಪ್ರೋತ್ಸಾಹಿಸಿದ್ದಾರೆ ಎಂದರು.
ನಿವೃತ್ತ ದೈಹಿಕ ಶಿಕ್ಷಕ ವೈ.ಎಚ್. ಬಚೇನಹಳ್ಳಿ ಕ್ರೀಡಾ ನಿಯಮಗಳನ್ನು ವಿವರಿಸಿದರು. ಈ ವೇಳೆ ಸಂಘಟನೆಯ ಅಧ್ಯಕ್ಷ ಶ್ರೀಕಾಂತ ಗೌಡರ, ಶರಣಪ್ಪ ಅಂಗಡಿ, ಸುರೇಶ ರಾಮೇನಹಳ್ಳಿ, ಫಕ್ಕೀರೇಶ ಚೌಡಕಿ, ಮಂಜುನಾಥ ಸಂಜೀವಣ್ಣವರ, ನಂದೀಶ ಗದಗ, ಪಿ.ಎಚ್. ರೆಡ್ಡಿ ಇದ್ದರು. ಸುರೇಶ ರಾಮೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.