10 ವರ್ಷಗಳ ಶೋಭಾ ಕರಂದ್ಲಾಜೆ ಸಾಧನೆ ಆಧರಿಸಿ ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ

| Published : Apr 23 2024, 12:50 AM IST

ಸಾರಾಂಶ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ 7 ವರ್ಷ ಸಂಸದರಾಗಿ ಹಾಗೂ 3 ವರ್ಷ ಕೇಂದ್ರದ ಕೃಷಿ ಸಚಿವರಾಗಿ ಶೋಭಾ ಕರಂದ್ಲಾಜೆ ಈ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಇಟ್ಟುಕೊಂಡು ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಲೋಕ ಸಭಾ ಚುನಾವಣೆಯ ಪಟ್ಟಣ ಉಸ್ತುವಾರಿ ಎಂ.ಆರ್.ರವಿಶಂಕರ್ ಸವಾಲು ಹಾಕಿದರು.

- ಕಾಂಗ್ರೆಸ್ ಕಚೇರಿ ಕಾರ್ಯಕ್ರಮದಲ್ಲಿ ಚುನಾವಣೆಯ ಉಸ್ತುವಾರಿ ಎಂ.ಆರ್.ರವಿಶಂಕರ್‌ ಸವಾಲು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ 7 ವರ್ಷ ಸಂಸದರಾಗಿ ಹಾಗೂ 3 ವರ್ಷ ಕೇಂದ್ರದ ಕೃಷಿ ಸಚಿವರಾಗಿ ಶೋಭಾ ಕರಂದ್ಲಾಜೆ ಈ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಇಟ್ಟುಕೊಂಡು ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಲೋಕ ಸಭಾ ಚುನಾವಣೆಯ ಪಟ್ಟಣ ಉಸ್ತುವಾರಿ ಎಂ.ಆರ್.ರವಿಶಂಕರ್ ಸವಾಲು ಹಾಕಿದರು.

ಸೋಮವಾರ ಪಟ್ಟಣದ ಕಾಂಗ್ರೆಸ್ ಕಚೇರಿಯ ಕಾರ್ಯಕ್ರಮದಲ್ಲಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ನನ್ನ ಕನಸು ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಇಟ್ಟುಕೊಂಡು ಬಹಿರಂಗ ಚರ್ಚೆಗೆ ಬರಲು ಕಾಂಗ್ರೆಸ್ ಸಿದ್ಧವಿದೆ. ಅದೇ ರೀತಿ ಶೋಭಾ ಅವರು ಕಳೆದ 10 ವರ್ಷ ಸಂಸದರಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿರುವುದರಿಂದ ಬಿಜೆಪಿ ಯವರು ಸಂಸದರ ಸಾಧನೆ ಇಟ್ಟುಕೊಂಡು ಮತ ಕೇಳುತ್ತಿಲ್ಲ . ಕೃಷಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು 3 ವರ್ಷದಲ್ಲಿ ಮಲೆನಾಡಿನ ರೈತರಿಗೆ, ಕೃಷಿಕ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ ? ಎಂದು ಸ್ಪಷ್ಟಪಡಿಸಬೇಕು ಎಂದರು.

ಸುಳ್ಳನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಚುನಾವಣೆ ನಡೆಸುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಸಂಸದರು 10 ವರ್ಷ ಗುಂಪುಗಾರಿಕೆ ಮಾಡಿಕೊಂಡು ಯಾವುದೇ ಕೊಡುಗೆ ನೀಡದೆ, ಜನಸಾಮಾನ್ಯರ ಕೈಗೂ ಸಿಗದೆ ರೈತ ವಿರೋಧಿ ಕಾನೂನು ಗಳನ್ನು ತಂದು ಬಿಜೆಪಿಯವರಿಂದಲೇ ಗೋಬ್ಯಾಕ್ ಶೋಭಾ ಎದುರಿಸಿದ್ದಾರೆ ಎಂದರು. ದೆಹಲಿಯಿಂದ ಆಗಿನ ಶಾಸಕರ ಮನೆಗೆ ಬಂದು ಹೋಗಿದ್ದು ಬಿಟ್ಟರೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ 10 ವರ್ಷದಲ್ಲಿ ಸಂಸದರಾಗಿ, ಕೃಷಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಸಾಧನೆ ಆಧಾರದ ಮೇಲೆ ಮತ ಯಾಚಿಸದೆ, ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪಿಸದೆ ಮೋದಿ ಅವರ ಆಡಳಿತ ವಿಚಾರ ಇಟ್ಟುಕೊಂಡು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿರುವುದರಿಂದ ಬಿಜೆಪಿ ಕರಪತ್ರದಲ್ಲಿ ಅವರ ಭಾವಚಿತ್ರವನ್ನು ಹಾಕದೆ ಮತಯಾಚಿಸುತ್ತಿದ್ದಾರೆ .

ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಜತೆಗೆ ಶಾಸಕ ಟಿ.ಡಿ.ರಾಜೇಗೌಡರು 55 ಕೋಟಿ ರು. ಅನುದಾನ ತಂದಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ದಾಖಲೆ ನೀಡಲಿದೆ. ಬಿಜೆಪಿ ಸಂಸದರು 10 ವರ್ಷದಲ್ಲಿ ತಂದ ಅನುದಾನದ ದಾಖಲೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಎಚ್.ಎಂ.ಮನು ಮಾತನಾಡಿ, 2013ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮಲೆನಾಡಿನ ರೈತರು, ಅಭಯಾರಣ್ಯ ರಸ್ತೆ, ಅರಣ್ಯ ಸಮಸ್ಯೆ ಮತ್ತಿತರರ ಸಮಸ್ಯೆಗಳಲ್ಲಿ 10 ವರ್ಷದಲ್ಲಿ ಸಂಸದ, ಸಚಿವರಾಗಿ ಎಷ್ಟನ್ನು ಬಗೆಹರಿಸಿದ್ದಾರೆ ಎಂಬುದನ್ನು ಮಾಜಿ ಸಂಸದರಾದ ಶೋಭಾ ಕರಂದ್ಲಾಜೆ ಪತ್ರಿಕೆಗಳ ಮೂಲಕ ತಿಳಿಸುವ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಲಾಭ ಪಡೆದು ಹೋಗುವ ಕೆಲಸ ಬಿಜೆಪಿಯವರು ಮಾಡಿದ್ದಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮುಂದಿನ ಎರಡು ದಿನದಲ್ಲಿ ಕೇಂದ್ರದ ಮಾಜಿ ಸಚಿವರನ್ನು ಕರೆತಂದು ಅವರ ಸಾಧನೆ ಗಳನ್ನು ಹೇಳಿಸುವ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸದರು ಬೇಕಾಗಿರುವುದರಿಂದ ಜಯಪ್ರಕಾಶ್ ಹೆಗ್ಡೆ ಅವರ ಗೆಲುವಿಗೆ ಶ್ರಮಿಸಬೇಕೆಂದರು.ಕಾಂಗ್ರೆಸ್ ಹೋಬಳಿ ಘಟಕ ಅಧ್ಯಕ್ಷ ಸಾಜು ಮಾತನಾಡಿ, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರ ಮನೆ ಬಾಗಿಲು ತಲುಪಿದ್ದು ಮತಯಾಚನೆ ಮಾಡಲು ಹೋದಾಗ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳಿಂದ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶೋಜ, ಸುರಯ್ಯಬಾನು, ಜುಬೇದಾ, ಬೆನ್ನಿ, ಸೈಯದ್ ವಸೀಂ. ಮುಕುಂದ, ಮಾಳೂರುದಿಣ್ಣೆ ರಮೇಶ್, ಹೊನಗಾರ್ ರಮೇಶ್, ಕ್ಸೇವಿಯಾರ್, ಎಚ್.ಎಂ. ಶಿವಣ್ಣ, ಶ್ರೀಧರ್,ಇ.ಸಿ.ಜೋಯಿ. ಗಫಾರ್, ಶಿವಕುಮಾರ್, ಪ್ರಭಾಕರ್, ನಾಗಭೂಷಣ, ಹರೀಶ್, ಗಂಗಾ, ಭಾಷ ,ಕಾರ್ತಿಕ್, ಸಂತೋಷ್ ಮತ್ತಿತರರು ಭಾಗವಹಿಸಿದ್ದರು.