ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಮೈಸೂರಿನ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ವಿರೋಧಿಸಿ ಮತ್ತು ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳುವಂತೆ ಆಗ್ರಹಿಸಿ ತಾಲ್ಲೂಕು ಕಾಂಗ್ರೆಸ್ ಸಮಿತಿಯು ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.ಪಟ್ಟಣದ ಬಂಗಾರ ಧಾಮದಿಂದ ಬೃಹತ್ ಪ್ರತಿಭಟನೆಯಲ್ಲಿ ತಾಲೂಕು ಕಚೇರಿ ಆವರಣಕ್ಕೆ ತಲುಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ರಾಜ್ಯಪಾಲರ ಕ್ರಮವನ್ನು ಖಂಡಿಸಿದರು. ಮೆರವಣಿಗೆ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೋಸ್ಟರ್ ಪ್ರದರ್ಶಿಸುತ್ತಾ ಬಂದ ಕಾರ್ಯಕರ್ತರು, ರಾಜ್ಯಪಾಲರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದೇ ವೇಳೆ ನಮ್ಮ ಸಿದ್ದು, ಕರ್ನಾಟಕದ ಶಕ್ತಿ ಎಂಬ ಘೋಷಣೆಯ ಪ್ಲೇ ಕಾರ್ಡ್ ಹಿಡಿದು, ಸಿದ್ದರಾಮಯ್ಯ ಪರ ಜಯ ಘೋಷ ಮೊಳಗಿಸಿದರು.
ಬಿಜೆಪಿ ಕೈಗೊಂಬೆಯಾದ ರಾಜ್ಯಪಾಲರು ಕರ್ನಾಟಕ ಬಿಟ್ಟು ತೊಲಗಬೇಕು, ಸೇಡಿನ ರಾಜಕಾರಣಕ್ಕೆ ಸರ್ಕಾರ ಕೆಡವಲು ಹೊರಟ ರಾಜ್ಯಪಾಲರು ಕರ್ನಾಟಕ ತೊರೆಯಬೇಕೆಂದು ಆಗ್ರಹಿಸುತ್ತಲೇ ಧಿಕ್ಕಾರದ ಘೋಷಣೆ ಕೂಗಿದರು. ತಾಲೂಕು ಕಚೇರಿ ಆವರಣದದಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆಂದು ವಾಗ್ದಾಳಿ ನಡೆಸಿದರು.ರಾಜಕೀಯ ಸೇಡಿಗಾಗಿ ರಾಜ್ಯಪಾಲರ ಕಚೇರಿ ದುರುಪಯೋಗವಾಗಿದೆ. ಕೇಂದ್ರದ ಹಿತಾಸಕ್ತಿಗಳಿಗೆ ಅದು ಬಲಿಯಾಗಿದೆ. ಸೇಡಿನ ರಾಜಕಾರಣಕ್ಕೆ ಬಲಿಯಾಗಿ ಬಹುಮತ ಇರುವ ಚುನಾಯಿತ ಸರ್ಕಾರವನ್ನು ಕೆಡುವಲು ಪಿತೂರಿ ನಡೆದಿದೆ ಎಂದು ದೂರಿದರು.
ದೇಶದ ರಾಜಕೀಯ ಇತಿಹಾಸದಲ್ಲಿಯೇ ರಾಜ್ಯಪಾಲರು ಪ್ರಾಮಾಣಿಕ ಸಿದ್ದರಾಮಯ್ಯ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬಿಜೆಪಿಯವರ ಕುತಂತ್ರಕ್ಕೆ ತಲೆ ಬಾಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮುಡಾದಲ್ಲಿ ಭ್ರಷ್ಟಾಚಾರ ನಡೆದಿದ್ದು, ಮಂತ್ರಿಗಳು, ಶಾಸಕರು ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಅವರು ತಪ್ಪು ಮಾಡಿ ಅದನ್ನು ಈಗ ಮುಖ್ಯಮಂತ್ರಿಗಳಿಗೆ ಕಳಂಕ ತರುವ ಹಿನ್ನೆಲೆಯಲ್ಲಿ ರಾಜಭವನ ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಅಣ್ಣಪ್ಪ ಹಾಲಘಟ್ಟ ಮತ್ತು ಸದಾನಂದಗೌಡ ಬಿಳಗಲಿ, ಜಯಶೀಲ್ ಗೌಡ ಅಂಕರವಳ್ಳಿ, ತಬಲಿ ಬಂಗಾರಪ್ಪ, ಎಂ.ಡಿ. ಶೇಖರ್, ಕಲ್ಲಂಬಿ ಹಿರಿಯಣ್ಣ, ನಾಗರಾಜಪ್ಪ, ಬಶೀರ್‌ಸಾಬ್, ಸಂಜೀವ, ಮಂಜಣ್ಣ, ಮತ್ತು ಪುರಸಭಾ ಸದಸ್ಯರು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.ರಾಜ್ಯಪಾಲರು ಪಕ್ಷಪಾತಿಯಾಗಿರಬಾರದು. ಆದರೆ ರಾಜ್ಯದಲ್ಲಿ ಬಿಜೆಪಿ ಪಕ್ಷದ ಕೈಗೊಂಬೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸಂವಿಧಾನ ಭಾಹಿರವಾಗಿದೆ. ಕೇಂದ್ರ ಸರ್ಕಾರ ತಕ್ಷಣವೇ ಅವರನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಸೊರಬ ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಗಣಪತಿ ಆಗ್ರಹಿಸಿದರು.