ಕುರ್ಕಿ ಬಳಿ ಸೇತುವೆ ದುರಸ್ತಿಗೆ ₹4.5 ಕೋಟಿ ಬಿಡುಗಡೆ

| Published : Aug 22 2024, 12:47 AM IST

ಕುರ್ಕಿ ಬಳಿ ಸೇತುವೆ ದುರಸ್ತಿಗೆ ₹4.5 ಕೋಟಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಬಳಿ ಕುಸಿದಿದ್ದ ಭದ್ರಾ ಕಾಲುವೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮ ₹4.5 ಕೋಟಿ ತುರ್ತಾಗಿ ಬಿಡುಗಡೆ ಮಾಡಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಒಟ್ಟು 2 ಸೇತುವೆ ನಿರ್ಮಾಣಕ್ಕೆ ₹9 ಕೋಟಿ: ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ಕುರ್ಕಿ ಗ್ರಾಮದ ಬಳಿ ಕುಸಿದಿದ್ದ ಭದ್ರಾ ಕಾಲುವೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮ ₹4.5 ಕೋಟಿ ತುರ್ತಾಗಿ ಬಿಡುಗಡೆ ಮಾಡಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಕುರ್ಕಿ ಗ್ರಾಮದ ಬಳಿ ಮಂಗಳವಾರ ಕಾಲುವೆ ಸೇತುವೆ ಕುಸಿದಿದ್ದು, ಜಮೀನಿಗೆ ರೈತರು ಹೋಗಿಬರಲು, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಅಲ್ಲದೇ, ಸೇತುವೆ ಕುಸಿದ ಪರಿಣಾಮ ಹರಿಹರ-ಹರಪನಹಳ್ಳಿ ತಾಲೂಕಿಗೆ ನೀರಿನ ಸಂಪರ್ಕ ಕಲ್ಪಿಸುವ ಜಂಕ್ಷನ್ ಗೇಟ್ ಇಲ್ಲೇ ಇದೆ. ಇದರಿಂದಾಗಿ ಎರಡೂ ತಾಲೂಕಿಗೆ ಅತಿ ಹೆಚ್ಚು ನೀರು ಹರಿದು ಈ ಭಾಗದ ರೈತರಿಗೆ ನೀರಿನ ಕೊರತೆ ಎದುರಾಗುತ್ತಿದೆ. ಈ ಹಿನ್ನೆಲೆ ನೀರಾವರಿ ನಿಗಮದ ಎಂ.ಡಿ. ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕರು ಮಂಗಳವಾರ ಸಂಜೆಯೇ ಸೇತುವೆ ನಿರ್ಮಾಣಕ್ಕೆ ₹4.5 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಈಚೆಗೆ ಕಬ್ಬೂರು ಬಳಿ ಭದ್ರಾ ಕಾಲುವೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದು ಹಳ್ಳದ ಬಳಿಯ ಸೇತುವೆ ಕಿತ್ತುಹೋಗಿತ್ತು. ಸೇತುವೆ ನಿರ್ಮಾಣಕ್ಕೆ ₹4.50 ಕೋಟಿ ಬಿಡುಗಡೆಯಾಗಿದೆ. ಒಟ್ಟು 2 ಸೇತುವೆ ನಿರ್ಮಾಣಕ್ಕೆ 9 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಬಸವಂತಪ್ಪ ಮಾಹಿತಿ ನೀಡಿದ್ದಾರೆ.

ಗಾಯಾಳುಗಳಿಗೆ ಸಾಂತ್ವನ:

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಕೋಡಿಹಳ್ಳಿ ಕ್ಯಾಂಪ್‌ನಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆಯಿಂದಾಗಿ, ಮನೆ ಬಿದ್ದು ಮೂವರು ತೀವ್ರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶದ ಮೂಲದ ಸುಕುಮಾರ, ಕೃಷ್ಣ, ಮಂಜಿತ್ ಮನೆ ಗೋಡೆ ಬಿದ್ದು ಗಾಯಗೊಂಡವರು. ಕೂಲಿ ಕಾರ್ಮಿಕರಾದ ಮೂವರೂ ಭತ್ತದ ನಾಟಿ ಮಾಡಲು ಕೋಡಿಹಳ್ಳಿ ಕ್ಯಾಂಪ್ ನಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆ ಬಿದ್ದಿದೆ. ಸುದ್ದಿ ತಿಳಿದ ತಕ್ಷಣವೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಾಸಕ ಕೆ.ಎಸ್. ಬಸವಂತಪ್ಪ, ಗಾಯಾಳುಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸೂಚಿಸಿದರು.

- - - -21ಕೆಡಿವಿಜಿ10, 11, 14:

ದಾವಣಗೆರೆ ತಾಲೂಕು ಕೋಡಿಹಳ್ಳಿ ಕ್ಯಾಂಪ್‌ನಲ್ಲಿ ಮನೆ ಗೋಡೆ ಕುಸಿದು ಬಿದ್ದಿದ್ದರಿಂದ ಗಾಯಗೊಂಡಿದ್ದವರನ್ನು ಜಿಲ್ಲಾಸ್ಪತ್ರೆಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ಮಾಡಿ, ಸಾಂತ್ವನ ಹೇಳಿದರು.