ಸಾರಾಂಶ
ಕುಷ್ಟಗಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ, ಶರಣೆ ಸತ್ಯಕ್ಕನ ಭಾವಚಿತ್ರ ಮೆರವಣಿಗೆ
ಕನ್ನಡಪ್ರಭ ವಾರ್ತೆ ಕುಷ್ಟಗಿಪೌರ ಕಾರ್ಮಿಕರು ಎಲ್ಲರೂ ಒಗ್ಗಟ್ಟಾಗಿ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪುರಸಭೆ ಸದಸ್ಯ ವಸಂತ ಕುಮಾರ ಮೇಲಿನಮನಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೌರ ಕಾರ್ಮಿಕರಿಗೆ ಎಲ್ಲರೂ ಗೌರವ ಕೊಡುತ್ತಾರೆಯೇ ಹೊರತು ದೊರಕುವಂತಹ ಸೌಲಭ್ಯಗಳನ್ನು ಕೊಡಿಸಲು ಮುಂದಾಗುತ್ತಿಲ್ಲ, ಇದು ವಿಪರ್ಯಾಸದ ಸಂಗತಿ ಎಂದರು.ಪೌರ ಕಾರ್ಮಿಕರು ದೇವರ ಸಮಾನವಾಗಿದ್ದು, ಅಂಥವರ ಕೆಲಸಗಳನ್ನು ಯಾವುದೆ ಕಾರಣಕ್ಕೂ ಮುಖ್ಯಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಬಾಕಿ ಇಟ್ಟುಕೊಳ್ಳಬಾರದು ಎಂದು ಹೇಳಿದರು.
ಪುರಸಭೆಯ ಸದಸ್ಯ ಮೈನುದ್ದೀನ್ ಮುಲ್ಲಾ ಮಾತನಾಡಿ, ಪೌರ ಕಾರ್ಮಿಕರು ಮಾಡುವ ಸ್ವಚ್ಛತಾ ಕಾರ್ಯದಿಂದ ನಗರ ಸ್ವಚ್ಛವಾಗಿರುತ್ತದೆ. ಅವರ ಕಾರ್ಯ ಶ್ಲಾಘನೀಯ. ಪೌರ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಪುರಸಭೆಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕಾಗಿದೆ ಎಂದರು.2017ನೇ ಸಾಲಿನಲ್ಲಿ ಪೌರ ಕಾರ್ಮಿಕರಿಗಾಗಿ ಮನೆ ನಿರ್ಮಾಣಕ್ಕಾಗಿ ನಿಡಶೇಸಿಯ ಹತ್ತಿರ ಎರಡು ಎಕರೆ ಭೂಮಿ ಖರೀದಿಸಲಾಗಿತ್ತು. ಆ ಸಮಯದಲ್ಲಿ, ಅದು ದೂರವಾಗುತ್ತದೆ, ಬೇಡ ಎಂದು ಮನವಿ ನೀಡಿದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಟ್ಟು, ಬೇರೆಡೆ ಎರಡು ಜಾಗ ನೋಡಲಾಯಿತು. ಆದರೆ ಕೆಲವು ಕಾರಣಗಳಿಂದ ಅಲ್ಲಿಯೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಬೇರೆಡೆ ಎರಡು ಎಕರೆ ಜಾಗ ಖರೀದಿ ಮಾಡುತ್ತೇವೆ. ಆನಂತರ ನಿವೇಶನ ಒದಗಿಸಿಕೊಡಲಾಗುತ್ತದೆ. ಖಾಲಿ ಜಾಗವಿದ್ದ ಪೌರಕಾರ್ಮಿಕರಿಗೆ ಸುಮಾರು ₹9 ಲಕ್ಷ ಸಹಾಯಧನ ನೀಡಲಾಗುವುದು ಎಂದು ಹೇಳಿದರು.
ಕೂಡಲೆ ಮನೆ ನಿರ್ಮಿಸಿಕೊಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ವಹಿಸಬೇಕು, ನಮಗೆ ವಾಸ ಮಾಡಲು ಸೂರು ಒದಗಿಸಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸಿದರು.ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶರಣೆ ಸತ್ಯಕ್ಕನ ಭಾವಚಿತ್ರ ಮೆರವಣಿಗೆ ನಡೆಯಿತು. ಪುರಸಭೆಯಿಂದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಪೌರ ಕಾರ್ಮಿಕರು ನೃತ್ಯದ ಮೂಲಕ ಗಮನ ಸೆಳೆದರು.
ಈ ವರ್ಷ ನಿಧನರಾದ ಪೌರಕಾರ್ಮಿಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಪುರಸಭೆಯ ಸದಸ್ಯ ಬಸವರಾಜ ಬುಡಕುಂಟಿ, ಮಹಾಂತೇಶ ಕಲಬಾವಿ, ವಿಜಯಲಕ್ಷ್ಮಿ, ಚಿರಂಜೀವಿ, ಪ್ರಾಣೇಶ, ಶಾಂತಪ್ಪ ಇದ್ದರು. ಜಾನಪದ ಕಲಾವಿದ ಶರಣಪ್ಪ ವಡಗೇರಿ ಕಾರ್ಯಕ್ರಮ ನಿರೂಪಿಸಿದರು.