ಉಡುಪಿ: ಶಿರೂರು ಗುಡ್ಡಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್‌ಗೆ ಗೌರವ

| Published : Sep 29 2024, 01:48 AM IST / Updated: Sep 29 2024, 01:49 AM IST

ಉಡುಪಿ: ಶಿರೂರು ಗುಡ್ಡಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್‌ಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ರಾತ್ರಿ 10 ಗಂಟೆಗೆ ಪಾರ್ಥಿವ ಶರೀರ ಉಡುಪಿಗೆ ಆಗಮಿಸಿದೆ ಎಂಬ ವಿಷಯ ತಿಳಿದ ಉಡುಪಿಯಲ್ಲಿರುವ ಕೇರಳದ ನೂರಾರು ಮಂದಿ ನಗರದ ಚಿತ್ತರಂಜನ್ ಸರ್ಕಲ್‌ಗೆ ಮಧ್ಯರಾತ್ರಿಯೇ ಆಗಮಿಸಿ ಅರ್ಜುನ್‌ನ ಮೃತದೇಹದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಗುಡ್ಡೆ ಕುಸಿತದಿಂದ ಲಾರಿ ಸಹಿತ ನದಿಗುರುಳಿ ಮೃತಪಟ್ಟ ಚಾಲಕ ಕೇರಳದ ಕೋಝಿಕ್ಕೋಡ್ ನಿವಾಸಿ ಅರ್ಜುನ್‌ನ ಪಾರ್ಥಿವ ಶರೀರ ಶುಕ್ರವಾರ ಮಧ್ಯರಾತ್ರಿ ಉಡುಪಿಗೆ ಆಗಮಿಸಿತು.

ರಾತ್ರಿ 10 ಗಂಟೆಗೆ ಪಾರ್ಥಿವ ಶರೀರ ಉಡುಪಿಗೆ ಆಗಮಿಸಿದೆ ಎಂಬ ವಿಷಯ ತಿಳಿದ ಉಡುಪಿಯಲ್ಲಿರುವ ಕೇರಳದ ನೂರಾರು ಮಂದಿ ನಗರದ ಚಿತ್ತರಂಜನ್ ಸರ್ಕಲ್‌ಗೆ ಮಧ್ಯರಾತ್ರಿಯೇ ಆಗಮಿಸಿ ಅರ್ಜುನ್‌ನ ಮೃತದೇಹದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ನಂತರ ಮೃತದೇಹವನ್ನು ಉಡುಪಿಯಿಂದ ಮಂಗಳೂರು ಮೂಲಕ ಕೇರಳಕ್ಕೆ ರವಾನೆ ಮಾಡಲಾಯಿತು.ಆದರೆ ಈ ಮೃತದೇಹಕ್ಕೆ ಸೂಕ್ತ ಗೌರವ ಸಲ್ಲಿಸುವಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ್ಯಂಬ್ಯುಲೆನ್ಸ್‌ನಲ್ಲಿ ಮೃತದೇಹದ ಭಾಗಗಳನ್ನು ಬಿಡಿಬಿಡಿಯಾಗಿ ಬಟ್ಟೆಗಳಲ್ಲಿ ಕಟ್ಟಿ ಕಳುಹಿಸಲಾಗಿತ್ತು. ಸಾಕಷ್ಟು ದಿನ ನದಿ ನೀರಲ್ಲಿದ್ದು, ಮೇಲಕ್ಕೆ ತೆಗೆದು 2 ದಿನಗಳಾಗಿದ್ದು, ದೂರದ ಕೇರಳಕ್ಕೆ ಕಳುಹಿಸುವಾಗ ಮೃತದೇಹ ಹಾಳಾಗದಂತೆ ಶಿಥಲೀಕರಣದ ವ್ಯವಸ್ಥೆಯನ್ನೂ ಮಾಡಿರಲಿಲ್ಲ.

ಕೊನೆಗೆ ಮಧ್ಯರಾತ್ರಿಯೇ ಉಡುಪಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ತಮ್ಮ ಸ್ವಂತ ಶಿಥಲೀಕರಣ ಪೆಟ್ಟಿಗೆಯಲ್ಲಿ ಮೃತದೇಹವನ್ನು ತಾವೇ ಖುದ್ದು ಜೋಡಿಸಿ, ಹೂವಿನ ಮಾಲೆಗಳನ್ನು ಹಾಕಿ ಗೌರವಯುತವಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಊರಿಗೆ ಕಳುಹಿಸಿಕೊಟ್ಟಿದ್ದಾರೆ.