ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎಂದು ಕುಳಿತುಕೊಳ್ಳಲು ಆಗುವುದಿಲ್ಲ, ಸಮಾಜಕ್ಕೆ ಬೇಕಾದ ಆಯುರ್ವೇದ ಪದ್ಧತಿಯನ್ನು ಜಾಗೃತಿಗೊಂಡ ಜನರೇ ಪಸರಿಸಲಿ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎಂದು ಕುಳಿತುಕೊಳ್ಳಲು ಆಗುವುದಿಲ್ಲ, ಸಮಾಜಕ್ಕೆ ಬೇಕಾದ ಆಯುರ್ವೇದ ಪದ್ಧತಿಯನ್ನು ಜಾಗೃತಿಗೊಂಡ ಜನರೇ ಪಸರಿಸಲಿ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಬೇಕಾಗಿರುವುದನ್ನು ಜಾಗೃತಿಗೊಂಡ ಜನರೇ ಮಾಡಬೇಕಿದೆ. ಇದೇ ಹಿನ್ನೆಲೆಯಲ್ಲಿ ಡಾ.ಗಿರಿಧರ ಕಜೆ ಅವರು ಈ ಐತಿಹಾಸಿಕ ಸಮ್ಮೇಳನವನ್ನು ಆಯೋಜಿಸಿದ್ದಾರೆ ಎಂದು ಪ್ರಶಂಸಿಸಿದರು.
ರಾಮಾಯಣದ ರಾಮ-ರಾವಣರ ಯುದ್ಧದ ಸಂದರ್ಭದಲ್ಲಿ ಸಮರದಲ್ಲಿ ಭಾಗಿಯಾದವರ ಗಾಯಗಳನ್ನು ವಾಸಿ ಮಾಡುವ, ದೇಹದ ಒಳಹೊಕ್ಕು ಶಸ್ತ್ರಗಳನ್ನು ಹೊರ ತೆಗೆಯುವ, ಮುರಿದ ಕೈಕಾಲುಗಳನ್ನು ಜೋಡಿಸುವ ಉಲ್ಲೇಖಗಳಿವೆ. ಇದು ಆಯುರ್ವೇದದ ಮಹತ್ವ ಹಾಗೂ ಆಯುರ್ವೇದ ನಿಧಾನವಲ್ಲ ಎಂಬುದನ್ನು ಸೂಚಿಸುತ್ತದೆ. ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತು ತಂದಾಗ ಅದರ ಗಾಳಿ ಬೀಸಿ ಮೃತಪಟ್ಟಿದ್ದ ಕಪಿಗಳು ಮತ್ತೆ ಜೀವವನ್ನು ಪಡೆದವು. ಹಾಗೆಯೇ ಈಗ ಈ ಆಯುರ್ವೇದ ಸಮ್ಮೇಳನದ ಗಾಳಿ ಬೀಸಿ ಭಾರತ ದೇಶ ಮತ್ತೆ ಎದ್ದು ನಿಲ್ಲುವಂತಾಗಲಿ ಎಂದು ಆಶಿಸಿದರು.ಪ್ರಾಥಮಿಕ ಹಂತದಲ್ಲಿ ನೀಡಿ:
ವೈದ್ಯರೇ ಹೋಗಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ರೋಗಿಗೆ ನೀಡುವ ಕಾಲವಿತ್ತು. ಆದರೆ ಈಗ ಅದನ್ನು ಕಾಣಲು ಸಾಧ್ಯವಿಲ್ಲ. ವಾಣಿಜ್ಯ ಉದ್ದೇಶದೊಂದಿಗೆ ಗಿಡಮೂಲಿಕೆಯನ್ನು ಬಳಸಿದಾಗ ಪೂರ್ಣ ಪ್ರಮಾಣದ ಚಿಕಿತ್ಸಾ ಫಲವನ್ನು ಕಾಣಲು ಅಸಾಧ್ಯ. ಆಯುರ್ವೇದವನ್ನು ಪ್ರಾಥಮಿಕ ಶಿಕ್ಷಣದಲ್ಲೇ ನೀಡುವಂತಾಗಬೇಕು. ಆಯುರ್ವೇದದಲ್ಲಿ ಹೇಳಲಾದ ಜೀವನ ಪದ್ಧತಿ ಹಾಗೂ ಕ್ರಮಗಳನ್ನು ಮಕ್ಕಳಿಗೆ ಚಿಕ್ಕಂದಿನಲ್ಲೇ ತಿಳಿಸಿದರೆ ಸ್ವಸ್ಥ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.ಮೂಡುಬಿದರೆಯ ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಯಾರ ದೇಹದ ಅಂಗಾಂಗಳು, ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತವೆಯೋ ಅವರೇ ಈ ಕಾಲದಲ್ಲಿ ನಿಜವಾದ ಶ್ರೀಮಂತರಾಗಿದ್ದಾರೆ. ಯೋಗ-ಆಯುರ್ವೇದ ಸೇರಿದಂತೆ ಜ್ಞಾನದ ಕೊಡುಗೆಯನ್ನು ವಿಶ್ವಕ್ಕೆ ಭಾರತ ನೀಡಿದೆ. ಆಯುರ್ವೇದದಲ್ಲಿ ಸೂಚಿಸಿದಂತೆ ಆಹಾರ ಪದ್ಧತಿಯನ್ನು ಅನುಸರಿಸಿದರೆ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ರೂವಾರಿ ಡಾ.ಗಿರಿಧರ ಕಜೆ ಅವರಿಗೆ ‘ಆಯುರ್ವೇದ ಬೃಹಸ್ಪತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೆಹಲಿಯ ಸಿಸಿಆರ್‌ಎಎಸ್ ಉಪ ನಿರ್ದೇಶಕ ಡಾ.ಎನ್.ಶ್ರೀಕಾಂತ್, ಸಿಸಿಐಎಂ ಮಾಜಿ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ್, ಜೋಧಪುರದ ಡಿಎಸ್‌ಆರ್‌ಆರ್ ಎಯು ಉಪ ಕುಲಪತಿ ಪ್ರೊ.ಗೋವಿಂದ ಶುಕ್ಲಾ, ಪತ್ರಕರ್ತರಾದ ಚನ್ನೇಗೌಡ, ಎಸ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್.....ಸಮ್ಮೇಳನದ ನಿರ್ಣಯಗಳು
1. ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣದಲ್ಲಿ ಆಯುರ್ವೇದ ಅಳವಡಿಸಬೇಕು.2. ಸರ್ಕಾರದ ಅನುದಾನವನ್ನು ಎಲ್ಲ ವೈದ್ಯಕೀಯ ಪದ್ಧತಿಗಳಿಗೆ ಸಮವಾಗಿ ಹಂಚಬೇಕು.
3. ಎಲ್ಲ ರಾಜ್ಯಗಳಲ್ಲೂ ಆಯುಷ್ ಸಚಿವಾಲಯ ಪ್ರಾರಂಭಿಸಬೇಕು.4. ಅಳಿವಿನಂಚಿನಲ್ಲಿರುವ ಪ್ರಭೇದಗಳು ಒಳಗೊಂಡಂತೆ ಔಷಧೀಯ ಸಸ್ಯಗಳನ್ನು ಬೆಳೆಸಲು ಸರ್ಕಾರದಿಂದ ಅನುದಾನ ನೀಡಬೇಕು
5. ಔಷಧೀಯ ಸಸ್ಯಗಳು ಮತ್ತು ಖನಿಜ ಮೂಲಗಳನ್ನು ಔಷಧೀಯ ಬಳಕೆಗೆ ಅನುಮತಿಸಬೇಕು.6. ಪ್ರತಿ ರಾಜ್ಯದಲ್ಲೂ ಕನಿಷ್ಠ 5 ಆಯುರ್ವೇದ ಸಂಶೋಧನಾ ಸಂಸ್ಥೆಗಳನ್ನು ಪ್ರಾರಂಭಿಸಬೇಕು.
7. ದೇಶದ ಎಲ್ಲ ತಾಲೂಕುಗಳಲ್ಲೂ ಆಯುರ್ವೇದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು.8. ಸಾರ್ವಜನಿಕರಿಗೆ ಆಯುರ್ವೇದದ ಮೂಲಕ ಜೀವನಶೈಲಿ ತಿಳಿಸಲು ತಾಲೂಕು ಮಟ್ಟದಲ್ಲಿ ದೇಶಾದ್ಯಂತ ಆಯುರ್ವೇದ ಸ್ವಾಸ್ಥ್ಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಬೇಕು.
9. ಆಯುರ್ವೇದದ ಶಾಸ್ತ್ರೀಯ ಔಷಧಿಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು.