ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ರೈತರ ಜಮೀನನ್ನು ವಕ್ಫ್ ಬೋರ್ಡ್ ಮೂಲಕ ಸ್ವಾಧೀನ ಪಡಿಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಇಲ್ಲಿನ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ರೈತರೊಂದಿಗೆ ಚೆಲ್ಲಾಟ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ವಕ್ಫ್ ಬೋರ್ಡ್ ರದ್ದುಪಡಿಸಬೇಕು ಮತ್ತು ಯತಾಸ್ಥಿತಿಯಲ್ಲಿ ಭೂಮಿಯನ್ನು ರೈತರಿಗೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿದರು.
ರೈತರು ತಮ್ಮ ಜೀವನಕ್ಕಾಗಿ ಭೂಮಿಯ ಮೇಲೆ ಅವಲಂಬಿತರಾಗಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೊಪ್ಪಳ ಜಿಲ್ಲೆಯಲ್ಲಿಯೇ 3500 ಎಕರೆ ಭೂಮಿಯನ್ನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರಿಂದ ರೈತರು ಅತಂಕಕ್ಕೆ ಒಳಗಾಗಿದ್ದು, ಕೂಡಲೇ ಮುಖ್ಯಮಂತ್ರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತಿದೆ. ಸಚಿವ ಸಂಪುಟದಿಂದ ಜಮೀರ್ ಅವರನ್ನು ಕಿತ್ತು ಹಾಕಬೇಕು. ಮುಖ್ಯಮಂತ್ರಿ ರಾಜ್ಯದ ರೈತರಿಗೆ ಕ್ಷಮೆಯಾಚಿಸ ಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕೆಂದರು.ಈ ಸಂದರ್ಭ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ನಗರಸಭೆ ಅಧ್ಯಕ್ಷ ಮೌಲಾಸಾಬಾ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ, ತಿಪ್ಪೇರುದ್ರಸ್ವಾಮಿ, ನಗರಸಭಾ ಸದಸ್ಯ ವಾಸುದೇವ ನವಲಿ, ನರಸಿಂಗರಾವ ಕುಲಕರ್ಣಿ, ಚೆನ್ನಪ್ಪ ಮಳಗಿ ಕಾಶಿನಾಥ ಚಿತ್ರಗಾರ, ಶ್ರೀನಿವಾಸ ಧೂಳ್, ಸೌಭಾಗ್ಯ, ರಾಧಾ ಉಮೇಶ, ಶಕುಂತಲಾ ಕಲ್ಲೂರು ಸೇರಿದಂತೆ ಇತರರು ಭಾಗವಹಿಸಿದ್ದರು.