ನಮ್ಮ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕೆಂದರೆ ಕನ್ನಡ ರಾಜ್ಯೋತ್ಸವ, ಕನ್ನಡದ ಪ್ರತಿಭೆಗಳನ್ನು ಗುರುತಿಸುವಂತಹ ಇಂತಹ ಕಾರ್ಯಕ್ರಮಗಳು ಪ್ರತಿ ವಾರ್ಡಿನಲ್ಲೂ ಹೆಚ್ಚೆಚ್ಚು ನಡೆಯುವಂತಾಗಬೇಕು ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕೆಂದರೆ ಕನ್ನಡ ರಾಜ್ಯೋತ್ಸವ, ಕನ್ನಡದ ಪ್ರತಿಭೆಗಳನ್ನು ಗುರುತಿಸುವಂತಹ ಇಂತಹ ಕಾರ್ಯಕ್ರಮಗಳು ಪ್ರತಿ ವಾರ್ಡಿನಲ್ಲೂ ಹೆಚ್ಚೆಚ್ಚು ನಡೆಯುವಂತಾಗಬೇಕು ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ಹೇಳಿದರು.

ಇಲ್ಲಿನ ವಿನೋಬನಗರದ 2ನೇ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಸೇವಾ ಸಮಿತಿಯಿಂದ ಶನಿವಾರ ಸಂಜೆ ಆಯೋಜಿಸಿದ 28ನೇ ವರ್ಷದ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ 28 ವರ್ಷಗಳಿಂದ ವಿನೋಬನಗರದ ಎ.ನಾಗರಾಜ ನೇತೃತ್ವ ಸಾರ್ವಜನಿಕ ಸೇವಾ ಸಮಿತಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತ ಬಂದಿದೆ. ಈ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ, ಮಕ್ಕಳಿಗೆ ಕ್ರೀಡೆಗಳು, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ, ವಾರ್ಡಿನ ಹಿರಿಯ ನಾಗರಿಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸುವಂತಹ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸೇವಾ ಕಾರ್ಯ ಇನ್ನೂ ಹೆಚ್ಚಿನದಾಗಿ ಮಾಡುವಂತಾಗಲಿ ಎಂದು ಹಾರೈಸಿದರು.

ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ.ಚಮನ್‌ಸಾಬ್ ಮಾತನಾಡಿ, ಕನ್ನಡ ಒಂದು ಭಾಷೆ ಅಷ್ಟೇ ಅಲ್ಲ. ಅದು ಒಂದು ಜೀವನ. ಪ್ರಪಂಚದ ಕೆಲವೇ ಜೀವಂತ ಭಾಷೆಗಳಲ್ಲಿ ಕನ್ನಡವೂ ಸಹಾ ಒಂದಾಗಿದೆ. ಈ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಈ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಸ್ವಾಗತಾರ್ಹ. ನಮ್ಮ ಕನ್ನಡ ಭಾಷೆಯನ್ನು ಸರ್ಕಾರ ಆಡಳಿತ ಭಾಷೆಯನ್ನಾಗಿ ಮಾಡಿದೆ. ಇದಕ್ಕೆಲ್ಲಾ ನೂರಾರು ಕನ್ನಡ ಕಟ್ಟಾಳುಗಳ ಶ್ರಮ ಕಾರಣ ಎಂದರು.

ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ ಮಾತನಾಡಿ, ನಮ್ಮ ನಾಡಿನ ಹೆಮ್ಮೆಯ ಕನ್ನಡ ರಾಜ್ಯೋತ್ಸವವನ್ನು ರಾಜ್ಯದಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಕನ್ನಡ ಶಾಲೆಗಳು ಮುಚ್ಚುವಂತಹ ಇಂತಹ ಸಂದರ್ಭದಲ್ಲಿ ನಾವೂ ಸಹಾ ನಮ್ಮ ಮನೆ, ವ್ಯವಹಾರಗಳಲ್ಲಿ ಕನ್ನಡ ಬಳಸಿ ಉಳಿಸುವಂತಾಗಬೇಕು ಎಂದು ಕರೆ ನೀಡಿದರು.

ವಿವಿಧ ಕ್ಷೇತ್ರಗಳ ಎಂ.ಸ್ಪಂದನಾ, ಎಚ್.ಎಲ್.ವಿಶ್ವನಾಥ, ಆರ್.ರಾಹುಲ್ (ದ್ವಿತೀಯ ಪಿಯುಸಿ ಅತೀ ಹೆಚ್ಚು ಅಂಕ), ಎಂ.ಎಸ್.ಪ್ರೇರಣ ಶೀಲವಂತ್(ಸ್ಕೌಟ್ ಗೈಡ್ ರಾಜ್ಯ ಪ್ರಶಸ್ತಿ ಪುರಸ್ಕೃತರು), ಜ್ಯೋತಿ (ಪೌರ ಕಾರ್ಮಿಕರು), ಷಣ್ಮುಖ ಪ್ರಭು ಆಚಾರ್ (ಕ್ರೀಡಾಪಟು), ಮಲ್ಲಪ್ಪರನ್ನು (ಹಿರಿಯ ನಾಗರಿಕ) ಸನ್ಮಾನಿಸಲಾಯಿತು. ನಂತರ ಭಾರತಿ ವಾದ್ಯವೃಂದದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಸಮಿತಿ ಅಧ್ಯಕ್ಷ, ವಾರ್ಡಿನ ಮಾಜಿ ಸದಸ್ಯ ಎ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಅಭಾವೀಲಿಂ ಮಹಾಸಭಾ ಗೌರವಾಧ್ಯಕ್ಷ ಎಸ್.ಜಿ.ಉಳುವಯ್ಯ, ಎಚ್.ಡಿ.ನಾಗರಾಜ, ಅಜ್ಮತ್ ವುಲ್ಲಾ, ಎಚ್.ಎಂ.ರುದ್ರೇಶ, ಸಮಿತಿ ಪದಾಧಿಕಾರಿಗಳು ಇತರರು ಇದ್ದರು.