ಬೀದಿಬದಿ ವ್ಯಾಪಾರಿಗಳು ಸ್ವನಿಧಿ ಸೆ ಸಮೃದ್ಧಿ ಯೋಜನೆ ಬಳಸಲಿ

| Published : Dec 29 2023, 01:31 AM IST / Updated: Dec 29 2023, 01:32 AM IST

ಸಾರಾಂಶ

ಪಿ.ಎಂ. ಸ್ವನಿಧಿ ಸೇ ಸಮೃದ್ಧಿ ಯೋಜನೆಯಿಂದ ಬೀದಿಬದಿ ವ್ಯಾಪಾರಿಗಳು ಮಾತ್ರವೇ ಬೆಳೆಯದೇ, ಕುಟುಂಬ ಸಮೃದ್ಧಿ ಆಗಬೇಕು ಎಂಬುದು ಯೋಜನೆ ಉದ್ದೇಶವಾಗಿದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಶಿರಾಳಕೊಪ್ಪದಲ್ಲಿ ಹೇಳಿದ್ದಾರೆ.

ಕನ್ನಡಪ್ರ ವಾರ್ತೆ, ಶಿರಾಳಕೊಪ್ಪ

ಪಿ.ಎಂ. ಸ್ವನಿಧಿ ಸೇ ಸಮೃದ್ಧಿ ಯೋಜನೆಯಿಂದ ಬೀದಿಬದಿ ವ್ಯಾಪಾರಿಗಳು ಮಾತ್ರವೇ ಬೆಳೆಯದೇ, ಕುಟುಂಬ ಸಮೃದ್ಧಿ ಆಗಬೇಕು ಎಂಬುದು ಯೋಜನೆ ಉದ್ದೇಶವಾಗಿದೆ. ಕುಟುಂಬದಲ್ಲಿ ಯಾವ ಸಮಯದಲ್ಲಿ ಏನು ಆಗುತ್ತದೆ ಎಂಬುದು ಯಾರಿಗೂ ತಿಳಿಯದು, ಈ ನಿಟ್ಟಿನಲ್ಲಿ ದೇಶದ ಜನರ ಕುಟುಂಬದ ಭದ್ರತೆಯನ್ನೂ ಕೇಂದ್ರ ವೀಕ್ಷಿಸುತ್ತಿದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.

ಶಿರಾಳಕೊಪ್ಪ ಪುರಸಭೆಯ ಯಡಿಯೂರಪ್ಪ ಸಭಾಂಗಣದಲ್ಲಿ ಗುರುವಾರ ನಡೆದ ಪಿ.ಎಂ. ಸ್ವನಿಧಿ - ಸೆ ಸಮೃದ್ಧಿ ಹಾಗೂ ವಿಕಲಚೇತನರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಭದ್ರತೆ ಪಡೆಯದೇ ಪ್ರಾರಂಭದಲ್ಲಿ ₹10 ಸಾವಿರ ಸಾಲ, ಅದನ್ನು 1 ವರ್ಷದಲ್ಲಿ ತೀರಿಸಿದರೆ ₹20 ಸಾವಿರ ಸಾಲ, ಅನಂತರ ₹50 ಸಾವಿರ ಹೀಗೆ ₹1 ಲಕ್ಷವರೆಗೆ ಬ್ಯಾಂಕ್ ಯಾವುದೇ ಗ್ಯಾರಂಟಿ ಇಲ್ಲದೇ ಸಾಲ ಕೊಡುವ ವ್ಯವಸ್ಥೆ ಈ ಯೋಜನೆಯಲ್ಲಿ ಇದೆ ಎಂದರು.

ಅಲ್ಲದೇ, ವಿವಿಧ ಜೀವ ವಿಮೆ ವ್ಯವಸ್ಥೆ ಇದೆ. ಈವರೆಗೆ ರೇಷನ್ ಕಾರ್ಡ್ ಇದ್ದಲ್ಲಿ ನಾವು ಮುಂಬರುವ ದಿನಗಳಲ್ಲಿ ದೇಶದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿ ರೇಷನ್ ಪಡೆಯುವ ವ್ಯವಸ್ಥೆ ಇದೆ. ಗರ್ಭಿಣಿ ಮಹಿಳೆಯರಿಗೆ ₹5 ಸಾವಿರವರೆಗೆ ಹಣ ದೊರೆಯಲಿದೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಮಾಡಿ, ಅದರ ಬಗ್ಗೆ ಹೆಚ್ಚು ಗಮನಹರಿಸಿದರೆ ನಿಮಗೆ ಪ್ರತಿ ತಿಂಗಳು ₹100 ದೊರಕಲಿದೆ. ಇಂಥ ಯೋಜನೆಯ ಪ್ರಯೋಜನೆ ಪಡೆಯುವಂತೆ ತಿಳಿಸಿದರು.

ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಕಾಶಿನಾಥ ಮಾತನಾಡಿ, ಇದೊಂದು ಅರಿವು ಮೂಡಿಸುವ ಕಾರ್ಯಕ್ರಮ. ಇಂದು ಭಾರತ ಇಡೀ ಜಗತ್ತಿಗೆ ಅರಿವು ಮೂಡಿಸುವ ದೇಶವಾಗಿದೆ. ನಾವು ವೈಯಕ್ತಿಕ ಅಭಿವೃದ್ಧಿ ಆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ವೈಯಕ್ತಿಕ ಸಾಲ ಪಡೆಯಲು ಮುಂದಾದಲ್ಲಿ ಬ್ಯಾಂಕ್‌ನಲ್ಲಿ ಶೇ.13 ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಅದಕ್ಕೆ ಶೇ.7 ಸಬ್ಸಿಡಿ ದೊರಕುತ್ತದೆ. ಇದನ್ನು ಉಪಯೋಗಿಸಿಕೊಂಡು ವ್ಯಾಪಾರ ಮಾಡಿ, ಮುಂದೆ ಬನ್ನಿ, ಮನೆ ಕಟ್ಟಿಕೊಳ್ಳಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿ ಎಂದು ಸಲಹೆ ನೀಡಿದರು.

ಇಂದು ಪಟ್ಟಣಗಳಲ್ಲಿ ನಿರಾಶ್ರಿತರ ತಂಗುದಾಣಗಳನ್ನು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ. ರಾತ್ರಿ ಉಚಿತ ಊಟವನ್ನು ಕೊಡಲಾಗುತ್ತಿದೆ. ಅರ್ಹರು ಇದರ ಸದುಪಯೋಗ ಪಡೆಯಬಹುದು ಎಂದು ತಿಳಿಸಿದರು.

ಪುರಸಭೆ ಸದಸ್ಯ ಟಿ.ರಾಜು ಮಾತನಾಡಿ, ಇದೊಂದು ಬೀದಿ ವ್ಯಾಪಾರಿಗಳಿಗೆ ಆಯೋಜಿಸಿರುವ ಕಾರ್ಯಕ್ರಮ. ನಾವು ಇಲ್ಲಿಯ ಬೀದಿಬದಿ ವ್ಯಾಪಾರಿಗಳ ಅನಕೂಲಕ್ಕಾಗಿ ಫುಡ್‌ ಕೊರ್ಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಇಲ್ಲಿ ಬಾಡಿಗೆ ಹಿಡಿದು ಅದನ್ನು ಹಾಗೆಯೇ ಬಿಟ್ಟು, ಬೇರೆ ಜಾಗದಲ್ಲಿ ವ್ಯಾಪಾರ ಮಾಡಿದರೂ ನೀವು ಬಾಡಿಗೆ ಕಟ್ಟಲೇ ಬೇಕಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧಿಕಾರಿ ಹೇಮಂತ ಡೊಳ್ಳೆ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಫುಡ್ ಕೋರ್ಟ್ ಬಾಡಿಗೆ ಕಟ್ಟುತ್ತಿಲ್ಲ, ನಮ್ಮ ಅಧಿಕಾರಿಗಳಿಂದ ಒತ್ತಡ ಬರುತ್ತಿದೆ. ಅತ್ಯುತ್ತಮವಾಗಿ ಫುಡ್ ಕೋರ್ಟ್ ಕಟ್ಟಿಸಿಕೊಟ್ಟಿದ್ದರೂ, ನೀವು ಬಾಡಿಗೆ ಕಟ್ಟದಿದ್ದರೆ ಮುಂಬರುವ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕ್ರಮ ಜರುಗಿಸದೇ ಬಿಡುವುದಿಲ್ಲ. ಪತ್ರಿಕೆ ವಿತರಕರು, ಹಾಲು ಮಾರುವವರಿಗೂ ಬೀದಿಬದಿ ವ್ಯಾಪಾರಸ್ಥರಂತೆ ಸೌಲಭ್ಯ ಕೊಡಿ ಎಂದು ಸರ್ಕಾರ ತಿಳಿಸಿದೆ. ವಿಶ್ವಕರ್ಮ ಯೋಜನೆ ಅಡಿ ಸಾಲ ಕೊಡುವ ಯೋಜನೆ ಮುಂಬರುವ ದಿನಗಳಲ್ಲಿ ಜಾರಿಯಾಗಲಿದೆ. ಇದೆಲ್ಲ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಮಾಡುತ್ತಿದೆ ಎಂದು ಹೇಳಿದರು.

- - - -28ಕೆಎಸ್ ಎಚ್ಆರ್1: ವಿಕಲಚೇತನರಿಂದ ಗಿಡಕ್ಕೆ ನೀರು ಹಾಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

-28ಕೆಎಸ್ ಎಚ್ಆರ್2: ಪಿಎಂ ಸ್ವನಿಧಿ-ಸೇ ಸಮೃದ್ಧಿ ಕಾಯರ್ಕ್ರಮವನ್ನು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿದರು.