ಹೊಸದುರ್ಗ ತಾಲೂಕಿನ ಬನಸಿಹಳ್ಳಿಯಲ್ಲಿ ದೊಡ್ಡಘಟ್ಟ ಜಾನಕಲ್ ವಲಯ ಮಟ್ಟದ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು.
ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರಸೇವಿಕ ಸಮಿತಿಯ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಮೀನಾಕ್ಷಿ ಸಲಹೆಕನ್ನಡಪ್ರಭ ವಾರ್ತೆ ಹೊಸದುರ್ಗ
ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ಹಿಂಸೆ ದಬ್ಬಾಳಿಕೆ ನೋವು ಭಾರತದ ಯಾವುದೇ ರಾಜ್ಯಗಳಲ್ಲಿ ಬರಬಾರದೆಂದರೆ ಹಿಂದುಗಳು ಜಾಗೃತಗೊಳ್ಳಲೇಬೇಕು. ಧರ್ಮದ ಉಳಿವಿಗಾಗಿ ಯುವ ಪೀಳಿಗೆ ಶ್ರಮಿಸುವ ಅಗತ್ಯತೆ ಇದೆ ಎಂದು ರಾಷ್ಟ್ರ ಸೇವಿಕ ಸಮಿತಿಯ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಮೀನಾಕ್ಷಿ ತಿಳಿಸಿದರು.ತಾಲೂಕಿನ ಬನಸಿಹಳ್ಳಿಯಲ್ಲಿ ದೊಡ್ಡಘಟ್ಟ ಜಾನಕಲ್ ವಲಯ ಮಟ್ಟದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಭಾರತ ಜಗತ್ತಿನಲ್ಲಿಯೇ ಹೆಚ್ಚು ಜನಸಂಖ್ಯೆ ಹಾಗೂ ಅತ್ಯುತ್ತಮ ಭೂ ಪ್ರದೇಶವನ್ನು ಹೊಂದಿದ ರಾಷ್ಟ್ರವಾಗಿದೆ ಹಿಂದೂಗಳು ಆಗದಿದ್ದರೆ ಮತ್ತೆ ಆಕ್ರಮಣ ನಡೆಯಬಹುದು. ನಮ್ಮದು ಸೋಲಿನ ಇತಿಹಾಸವಲ್ಲ ಸಂಘರ್ಷದ ಇತಿಹಾಸ, ಹಿಂದೂ ಸಮಾಜದ ಜಾಗೃತಿಗಾಗಿ ನಾಡಿನೆಲ್ಲೆಡೆ ಹಿಂದೂ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಭಾರತೀಯ ಸನಾತನ ಪರಂಪರೆಯಲ್ಲಿ ಯಾರೂ ಬಿಟ್ಟಿ ಭಾಗ್ಯಗಳನ್ನು ನಂಬಿದವರಲ್ಲ ನಿರಂತರ ಶ್ರಮಪಟ್ಟು ಇಲ್ಲಿನ ರೈತರು ಕೂಲಿ ಕಾರ್ಮಿಕರು ತನ್ನ ಬದುಕು ಕಟ್ಟಿಕೊಂಡಿದ್ದರು. ಇಂಗ್ಲಿಷ್ ಮೆಖಾಲೆ ಶಿಕ್ಷಣ ಪದ್ಧತಿ ಬಂದು ಸನಾತನ ಶಿಕ್ಷಣ ಪದ್ಧತಿ ದೂರವಾದ ಪರಿಣಾಮ ಪರಕೀಯರ ಆಳ್ವಿಕೆ ನಮ್ಮನ್ನು ಮತ್ತಷ್ಟು ಅತಿಕ್ರಮಿಸಿದೆ. ಇಂದು ಕೇವಲ ಆರ್ಥಿಕ ಬದುಕಿನ ಶಿಕ್ಷಣವನ್ನ ನಾವು ಪಡೆಯುತ್ತಿದ್ದು ಬದುಕಿನ ಸಂಸ್ಕಾರದ ಶಿಕ್ಷಣ ಪಡೆಯುವ ಅವಶ್ಯಕತೆ ಇದೆ ಎಂದರು.ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎಸ್.ಕಲ್ಮಠ್ ಮಾತನಾಡಿ, ಹಿಂದೂ ಸಂಗಮ ಇದೊಂದು ಜಾಗೃತಿಯ ಸಮಾವೇಶ ಯುಗಾದಿ ಶಿವರಾತ್ರಿ ಇವೆಲ್ಲವನ್ನು ಒಳಗೊಂಡ ಮೂಲವೇ ಹಿಂದೂ ಸಂಸ್ಕೃತಿ, ಪ್ರಪಂಚದ ಸನಾತನ ಹಿಂದೂ ಧರ್ಮ, ರಾಮಾಯಣ ಮಹಾಭಾರತ, ಉಪನಿಷತ್ತು, ಹಿಂದೂ ಧರ್ಮದ ಬೇರುಗಳು. ಪ್ರಪಂಚದ ಎಲ್ಲಾ ದೇಶಗಳು ಭಾರತವನ್ನು ಹಿಂದೂ ಸ್ಥಾನ ಎಂದು ಕರೆಯುತ್ತವೆ. ಹಿಂದುಗಳು ಎಂದಿಗೂ ವಿಭಜನೆಯಾಗಬಾರದೆಂದು ಭಜನೆ ದೇವರ ಧ್ಯಾನವನ್ನು ನಮ್ಮ ಪೂರ್ವಜರು ಮಾಡುತ್ತಿದ್ದರು ಎಂದರು.
ಸಾವಿರಾರು ವರ್ಷಗಳ ಹಿಂದಿನ ಸಿಂಧೂ ಬಯಲಿನ ನಾಗರಿಕತೆ, ಹರಪ್ಪ ಮೊಹೆಂಜೋದಾರೋ, ನಳಂದ, ಬನಾರಸ್‌ಗಳ ಕಾಲದಲ್ಲಿಯೂ ಹಿಂದೂ ಸಂಸ್ಕೃತಿ ಅನಾವರಣಗೊಂಡಿದೆ. ಪ್ರಸ್ತುತ ಹಿಂದುಗಳೆಲ್ಲ ಬಂಧುಗಳಾಗಿರುವ ಅತ್ಯವಶ್ಯಕತೆ ಇದೆ. ಬಾಂಗ್ಲಾ ಪಾಕಿಸ್ತಾನ ಅಫ್ಘಾನಿಸ್ತಾನ ಚೈನಾ ಶ್ರೀಲಂಕಾ ದೇಶಗಳು ಇಂದಿಗೂ ನೆಮ್ಮದಿಯಾಗಿಲ್ಲ. ಪ್ರಸ್ತುತ ಜಾತೀಯತೆ ಹೋಗಲಾಡಿಸಲು ಅಂತರ್ ಜಾತಿ ವಿವಾಹ ಮಾಡಿಸುವ ಅವಶ್ಯಕತೆ ಇದೆ. ಸ್ತ್ರೀಯರ ಮೇಲಿನ ಗೌರವದಿಂದ ಸನಾತನ ಹಿಂದೂ ಧರ್ಮವನ್ನು ನಾವು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಕಾರ್ಯಕ್ರಮದಲ್ಲಿ ಹರೀಶ್ ಭರಮಗಿರಿ, ಹಿರಿಯರಾದ ವಿರೂಪಾಕ್ಷಪ್ಪ ಆರ್‌ಎಸ್‌ಎಸ್ ಕಾರ್ಯವಾಹ ವಾಸುದೇವ್ ಲೆಕ್ಕೆನಹಳ್ಳಿ, ಗೂಳಿಹಟ್ಟಿ ಕೃಷ್ಣಮೂರ್ತಿ, ಸುರೇಶ್, ಸಾಗರ್ .ಆಕಾಶ್, ತಮ್ಮಣ್ಣ ಕೋಡಿಹಳ್ಳಿ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಜಾನಕಲ್ ತಿಮ್ಮಪ್ಪ, ಮಾವಿನಕಟ್ಟೆ ಗುರುಸ್ವಾಮಿ, ಬಿಎಸ್ ದ್ಯಾಮಪ್ಪ, ಎಂ ಲಕ್ಷ್ಮಣ್, ಶಂಕರಮೂರ್ತಿ, ತಣಿಗೆಕಲ್ಲು ತುಂಬಿನಕೆರೆ ಬಸವರಾಜ್ ಮತ್ತಿತರರು ಹಾಜರಿದ್ದರು.