ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಕರ್ನಾಟಕ ರಾಜ್ಯೋತ್ಸವದ ದಿನ ಕನ್ನಡ, ಕನ್ನಡಿಗರು ಮತ್ತು ರಾಜ್ಯದ ನೆಲ ಜಲದ ಮಾತುಗಳು ಅದರೊಟ್ಟಿಗೆ ಕ್ಷೇತ್ರದ ಅಭಿವೃದ್ಧಿಯ ಮಾತುಗಳು ಹೆಚ್ಚಾಗಿ ಕಾಣುವದು ರೂಢಿ ಆದರೆ ಹುಮನಾಬಾದ್‌ನಲ್ಲಿ ಎಂದಿನಂತೆ ರಾಜಕೀಯ, ವಯಕ್ತಿಕ ಮಾತುಗಳು, ಸವಾಲು, ರಾಜೀನಾಮೆಯ ಸವಾಲಿನ ಸದ್ದು ಹೆಚ್ಚಾಗಿ ಕನ್ನಡದ ಉತ್ಸವ ಇಲ್ಲಿ ಗೌಣವಾದಂತಿತ್ತು.

ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನಡೆದ ರಾಜೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣದ ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಅವರು, ರಾಜ್ಯದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಇಲ್ಲ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ ಅವರು ಅನುದಾನ ತಂದಿರು ವುದನ್ನು ಸಾಬೀತುಪಡಿಸಿದರೆ, ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಎಸ್‌ಎಸ್‌ಪಿಡಿ ಯೋಜನೆಯಡಿ ದುಬಲಗುಂಡಿ ಹಾಗೂ ಚಿಟಗುಪ್ಪ ಪಟ್ಟಣಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಬೇಡಿಕೆ ಸಲ್ಲಿಸಿ ಆರು ತಿಂಗಳು ಕಳೆದಿದ್ದರೂ, ಈವರೆಗೆ ಒಂದು ನಯಾಪೈಸೆಯೂ ಬಿಡುಗಡೆಯಾಗಿಲ್ಲ ಆದರೆ ಅನುದಾನ ಬಿಡುಗಡೆಯಾಗಿದೆ ಎಂಬಂತೆ ತಪ್ಪು ಮಾಹಿತಿ ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದರು.


ಕಾಂಗ್ರೆಸ್‌ ಪಕ್ಷದವರು ಮಠ, ಮಂದಿರಗಳ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮಠದ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಪಡೆಯುತ್ತಿರುವುದು, ಆರ್‌ಟಿಒ ಚೆಕ್‌ಪೋಸ್ಟ್‌ ಜಾಗದ ಲೂಟಿಗೆ ಪ್ರಯತ್ನ ಹಾಗೂ ದೇವಸ್ಥಾನದ ಹೆಸರಿನಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪದ ಬಾಡಿಗೆಯನ್ನೂ ಅವರೇ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಂಬರುವ ದಿನಗಳಲ್ಲಿ ಈ ಕುರಿತು ಇನ್ನೂ ಹೆಚ್ಚಿನ ಜಾತಕ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಸಿದರು.

ತಹಸೀಲ್ದಾರ ಜಗದೀಶ ಚೌರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಚಿದಾನಂದ ಚಿಕಮಠ ವಿಶೇಷ ಉಪನ್ಯಾಸ ಮಂಡಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಭುವನೇಶ್ವರಿ ನಿರೋಪಿಸಿದರು.