ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಭಾಧ್ಯಕ್ಷ ಕಚೇರಿಯ ಆಡಳಿತಾತ್ಮಕ ಸುಧಾರಣೆ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಒತ್ತಾಯಿಸಿದರು.ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಗೌರವ ಕಾಪಾಡಬೇಕಾದ ಸಭಾಧ್ಯಕ್ಷರ ಮೇಲೆಯೇ ಈ ರೀತಿ ಆರೋಪ ಕೇಳಿ ಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದಾಗಿ ಸಭಾಧ್ಯಕ್ಷರ ಸ್ಥಾನಕ್ಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಪಾರದರ್ಶಕ ವಾದ ಸಮಗ್ರ ತನಿಖೆಯಾಗಬೇಕು ಎಂದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯದ್ಯಂತ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಿಲ್ಲ. ಆದರೆ, ವಿಧಾನಸೌಧಕ್ಕೆ ಮತ್ತು ಸಭಾಪತಿಗಳ ಕಚೇರಿಗೆ ಅನಾವಶ್ಯಕವಾಗಿ ವಿವಿಧ ಸಾಮಗ್ರಿಗಳನ್ನು ಖರೀದಿಸುವ ಮೂಲಕ ದುಂದುವೆಚ್ಚ ಮಾಡುತ್ತಿದ್ದಾರೆ ಅಲ್ಲದೆ, ಈ ಸಾಮಗ್ರಿಗಳ ಖರೀದಿ ಗುತ್ತಿಯನ್ನು ಮಂಗಳೂರು ಮೂಲದ ಕಂಪನಿಗೆ ನೀಡಿರುವುದು ಸಂಶಯಾಸ್ಪದವಾಗಿದೆ ಎಂದ ಅವರು, ಈ ಕಂಪನಿಯವರು ಮತ್ತು ಸಭಾಪತಿಗಳು ತನಿಖೆಗೆ ಒಳಪಡಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಬಿಜೆಪಿ ಬೆಳಗಾವಿ ಮಾಹನಗರ ಮಹಿಳಾ ಅಧ್ಯಕ್ಷೆ ಗೀತಾ ಸುತಾರ, ಸಚಿನ ಕಡಿ, ಸಂದೀಪ ದೇಶಪಾಂಡೆ, ರಾಜೇಂದ್ರ ಹರಕುನಿ ಇದ್ದರು.
;Resize=(128,128))
;Resize=(128,128))