ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನಮ್ಮ ಕ್ಷೇತ್ರದಲ್ಲಿ ಸುಮಾರು ₹ 700 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಶಾಲಾ ಕಟ್ಟಡ, ನೀರಾವರಿ ಸೇರಿ ಅನೇಕ ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಶೇಷ ಅನುದಾನ ಬಿಡುಗಡೆಯಾಗಲಿದೆ. ಇದು ಅಭಿವೃದ್ಧಿ ಅಲ್ಲವೇ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಪ್ರಶ್ನಿಸಿದರು.ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 10 ಕೋಟಿ ವೆಚ್ಚದಲ್ಲಿ ಇಂಗಳಗೇರಿಯಿಂದ ಬಳವಾಟ ಹಾಗೂ ಇಂಗಳಗೇರಿಂದ ಗುಡ್ನಾಳ ಕ್ರಾಸ್‌ವರೆಗಿನ ಡಾಂಬರ್ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಮತಕ್ಷೇತ್ರದಲ್ಲಿ ಉಕ್ಕಲಿ, ದಿಂಡವಾರ, ಸಾಸನೂರ, ಬಳಗಾನೂರ, ಬಾವೂರ, ಮೂಕಿಹಾಳ, ನಾಲತವಾಡ ಮಾರ್ಗದ ಕೆಸಿಪ್ ಯೋಜನೆಯಡಿಯಲ್ಲಿ ಸುಮಾರು ₹ 770 ಕೋಟಿಯಲ್ಲಿ 177ನೇ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಈ ಮೊದಲು ₹ 35 ಕೋಟಿ ವೆಚ್ಚದಲ್ಲಿ ನಾಲುತವಾಡದಿಂದ ತಂಗಡಗಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಜತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ₹ 17.5 ಕೋಟಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಸೇರಿ ಶಾಲಾ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ, ಕೆರೆ ತುಂಬುವ ಯೋಜನೆ, ನೀರಾವರಿ ಯೋಜನೆ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಲೆಕ್ಕಾಚಾರದಲ್ಲಿ ಸುಮಾರು ₹ 1 ಲಕ್ಷ 20 ಸಾವಿರ ಮೊತ್ತದ ಅವೈಜ್ಞಾನಿಕವಾಗಿ ವಿವಿಧ ಕಾಮಗಾರಿಗಳನ್ನು ಗುತ್ತಿಗೆ ನೀಡಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೆ ಉಳಿಸಿ ಹೋಗಿದ್ದಾರೆ. ಹಾಗಂತ ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳದೆ ಗುತ್ತಿಗೆದಾರರಿಗೆ ಹಂತಹಂತವಾಗಿ ಬಿಡುಗೆಡೆ ಮಾಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲೂ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ. ಆದರೆ, ಪಂಚ ಗ್ರಾರಂಟಿಗಳನ್ನು ಕೆಲವರು ಟೀಕೆ ಮಾಡುತ್ತಾರೆ. ಯಾರು ಟೀಕೆ ಮಾಡುತ್ತಾರೆ. ಯಾರು ಆರ್ಥಿಕವಾಗಿ ಸಬಲರಿದ್ದಾರೋ ಅಂತವರು ಗ್ಯಾರಂಟಿ ಯೋಜನೆಯಿಂದ ಹೊರ ಬಂದು ಅಭಿವೃದ್ಧಿಗೆ ಕೈಜೋಡಿಸಲಿ ಎಂದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ತರಲಿಲ್ಲ, ಬಡವರಿಗೆ ಮನೆ ಹಂಚಲಿಲ್ಲ, ಶಾಲಾ ಕಟ್ಟಡ ಮಾಡಲಿಲ್ಲ, ರೈತರಿಗೆ ಯೋಜನೆಗಳನ್ನು ಜಾರಿಗೊಳಿಸಲಿಲ್ಲ, ಯಾವ ಯೋಜನೆಗಳು ಅನುಷ್ಠಾನಗೊಳಿಸಲಿಲ್ಲ. ಆದರೆ, ಎಲ್ಲರ ಕಣ್ಣಿಗೆ ಕಾಣುವ ಹಾರೆ ಸಿಸಿ ರಸ್ತೆಗಳನ್ನು ಮಾಡಿದರೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಎಂದು ಹೇಳಲಾಗುತ್ತದೆಯೇ? ಎಂದು ಹರಿಹಾಯ್ದರು.
ಈ ವೇಳೆ ಅಕ್ಕಮಹಾದೇವಿ ಅಮ್ಮನವರು, ಬಾಬು ಕರಡ್ಡಿ, ಶ್ರೀಕಾಂತಗೌಡ ಪಾಟೀಲ, ರಮೇಶಗೌಡ ಮುದ್ದೇಬಿಹಾಳ, ಸಂಗಣ್ಣ ನಾಗಾವಿ, ಪ್ರಕಾಶ ಮಾಲಗತ್ತಿ, ದೇಸು ಮಾಲಗತ್ತಿ, ಸಂಗನಗೌಡ ಬಿರಾದಾರ(ಜಿಟಿಸಿ), ಗುತ್ತಿಗೆದಾರ ಕೆ.ಎಸ್.ಪಾಟೀಲ, ಸಚಿನ ಪಾಟೀಲ, ಬಾಬಾ ಪಟೇಲ ಸೇರಿ ಹಲವರು ಇದ್ದರು.-----------ಕೋಟ್
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ. ರೈತರ ಬಗ್ಗೆ ಕಾಳಜಿ ಇರುವವರಂತೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಬಿಜೆಪಿಯವರು ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ. ಜತೆಗೆ, ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ಬಿಡುಗಡೆಗೊಳಿಸುವಂತೆ ಹೇಳಲಿ. ನಾವ್ಯಾಕೆ ಬೇಡ ಎನ್ನೋಣ. ಯಾರನ್ನೋ ಮೆಚ್ಚಿಸಲು ಅಥವಾ ಜನರ ದಾರಿ ತಪ್ಪಿಸಲು ವಿರೋಧದ ಹೇಳಿಕೆ ನೀಡುವುದನ್ನು ಬಿಟ್ಟು ಜನರ ಒಳಿತಿಗಾಗಿ ಕೈಜೋಡಿಸಲಿ.- ಸಿ.ಎಸ್.ನಾಡಗೌಡ, ಶಾಸಕರು, ಕೆಎಸ್‌ಡಿಎಲ್ ಅಧ್ಯಕ್ಷರು
;Resize=(128,128))
;Resize=(128,128))