ಹಬ್ಬಗಳಿಂದ ಸಮಾಜದಲ್ಲಿ ಸೌಹಾರ್ದತೆ ನೆಲೆಸುವಂತಾಗಲಿ: ಎಸ್ ಪಿ ಕುಶಾಲ್ ಚೌಕ್ಷೆ

| Published : Sep 06 2024, 01:10 AM IST

ಹಬ್ಬಗಳಿಂದ ಸಮಾಜದಲ್ಲಿ ಸೌಹಾರ್ದತೆ ನೆಲೆಸುವಂತಾಗಲಿ: ಎಸ್ ಪಿ ಕುಶಾಲ್ ಚೌಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೆರವಣಿಗೆ ವೇಳೆ ಯಾರೂ ಸಹ ಡಿಜೆ ಬಳಸುವಂತಿಲ್ಲ. ಅತಿ ಶಬ್ದ ಮಾಡುವುದರಿಂದ ಹಿರಿಯ ನಾಗರಿಕರು, ಮಕ್ಕಳು,ಗರ್ಭಿಣಿಯರು ಬಾಣಂತಿಯರಿಗೆ ಅಪಾಯವಾಗುವ ಸಂಭವ ಹೆಚ್ಚಿದೆ. ಪಟಾಕಿ ಸಿಡಿಸಬಾರದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಧಾರ್ಮಿಕ ಆಚರಣೆಗಳಿಂದ ಸಮಾಜದಲ್ಲಿ ಕೋಮು ಸೌಹಾರ್ದತೆ ನೆಲೆಸುವಂತಾಗಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಧಾರ್ಮಿಕ ಮುಖಂಡರಲ್ಲಿ ಮನವಿ ಮಾಡಿದರು.

ನಗರದ ಪೊಲೀಸ್‌ ಸಮುದಾಯ ಭವನದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನಸಿಕ ನೆಮ್ಮದಿ ಹಾಗೂ ಸಂತೋಷದಿಂದ ಮಾಡುವ ಹಬ್ಬ- ಹರಿದಿನಗಳು ಯಾರಿಗೂ ತೊಂದರೆಯಾಗದಂತೆ ನಡೆಯಬೇಕು. ಈ ಬಾರಿ ರಾಜ್ಯ ಸರ್ಕಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಹಲವು ನಿಯಮಗಳನ್ನು ರೂಪಿಸಿದೆ. ಇವುಗಳನ್ನು ತಿಳಿದುಕೊಂಡು ಎಲ್ಲಿಯೂ ಲೋಪವಾಗದಂತೆ ಸಂಘಟಕರು, ಧಾರ್ಮಿಕ ಮುಖಂಡರು ಎಚ್ಚರವಹಿಸಿ ಪಾಲಿಸಬೇಕು ಎಂದು ತಿಳಿಸಿದರು.

ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೆರವಣಿಗೆ ವೇಳೆ ಯಾರೂ ಸಹ ಡಿಜೆ ಬಳಸುವಂತಿಲ್ಲ. ಅತಿ ಶಬ್ದ ಮಾಡುವುದರಿಂದ ಹಿರಿಯ ನಾಗರಿಕರು, ಮಕ್ಕಳು,ಗರ್ಭಿಣಿಯರು ಬಾಣಂತಿಯರಿಗೆ ಅಪಾಯವಾಗುವ ಸಂಭವ ಹೆಚ್ಚಿದೆ. ಪಟಾಕಿ ಸಿಡಿಸಬಾರದು. ಸಿಡಿಸಲೇಬೇಕು ಎಂದಿದ್ದರೆ ಹಸಿರು ಪಟಾಕಿಯನ್ನು ಮಿತವಾಗಿ ಬಳಸಿ, ಸಂಘ- ಸಂಸ್ಥೆಗಳ ಮುಖಂಡರು ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಗುರುತಿನ ಚೀಟಿ ಹಾಗೂ ಸಮವಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಅಶಾಂತಿ ಸೃಷ್ಟಿಸುವ ಸಮಾಜಘಾತುಕ ಶಕ್ತಿಗಳನ್ನು ತಡೆಯಲು ಇಲಾಖೆಯೊಂದಿಗೆ ಸಹಕರಿಸಬೇಕು. ಸರ್ಕಾರ ನೀಡಿರುವ ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗಣೇಶನ ಮೂರ್ತಿ ವಿಸರ್ಜನೆ ಶ್ರದ್ದಾಭಕ್ತಿಯಿಂದ ಮಾಡಬೇಕು. ಆದರೆ ಕೆಲವರು ಮದ್ಯವನ್ನು ಸೇವಿಸಿ ಉತ್ಸವದಲ್ಲಿ ಭಾಗವಹಿಸುವುದು, ಹಬ್ಬದ ಪ್ರಯುಕ್ತ ಇಸ್ಪೀಟ್ ಸೇರಿ ಹಲವು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಾರೆ. ಇದು ಧಾರ್ಮಿಕ ಆಚರಣೆಗೆ ತೋರುವ ಅಗೌರವ. ಹೀಗಾಗಿ ಯಾರೂ ಇಂತಹ ಕೆಲಸ ಮಾಡಬಾರದು ಎಂದು ತಿಳಿ ಹೇಳಿದರು.

ಸಮಾಜದಲ್ಲಿ ಎಲ್ಲ ಸಮುದಾಯದವರು ಇದ್ದಾರೆ. ಹೀಗಾಗಿ ಯಾರಿಗೂ ತೊಂದರೆಯಾಗದಂತೆ ಸಹಕರಿಸಬೇಕು. ಯಾರಿಗೂ ಸಮಸ್ಯೆ ಆಗಬಾರದು. ನಿಗದಿತ ಮಾರ್ಗದಲ್ಲಿ ಮಾತ್ರ ಮೆರವಣಿಗೆ ಮಾಡಬೇಕು. ಪ್ರಮುಖ ವೃತ್ತಗಳು, ಬೇರೆ ಧರ್ಮದವರ ಸ್ಥಳಗಳಿರುವೆಡೆ ವಿನಾಕಾರಣ ಸಮಸ್ಯೆ ಸೃಷ್ಟಿಸಬಾರದು. ಗಣೇಶನ ಉತ್ಸವ ಆಯೋಜಕರು ಐಡಿ ಕಾರ್ಡ್, ಟೀಶರ್ಟ್ ಬಳಸಿದರೆ ಒಳ್ಳೆಯದು ಎಂದರು.

ಯಾವುದೇ ಪ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವಾಗ ನಗರಸಭೆ ಅನುಮತಿ ಪಡೆದೇ ಹಾಕಬೇಕು. ಹೀಗೆ ಹಾಕುವಾಗ ಕೋಮುಭಾವನೆ ಕೆರಳಿಸುವಂತೆ, ಸಮಾಜಘಾತುಕ ಶಕ್ತಿಗಳನ್ನು ವೈಭವೀಕರಿಸುವಂತೆ ಇರಬಾರದು. ಕಾನೂನು ಪ್ರಕಾರವೇ ಎಲ್ಲವೂ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಮಾಡಬಾರದು. ಜಿಲ್ಲೆಯಲ್ಲಿ ಎಲ್ಲ ಕಾನೂನುಗಳನ್ನು ಪಾಲಿಸಿ ಶಾಂತಿಯುತವಾಗಿ ಗಣೇಶ ಉತ್ಸವ ನಡೆಸುವ ಆಯೋಜಕರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸಿಂ ಮಾತನಾಡಿ, ಜಿಲ್ಲೆಯಲ್ಲಿ ಸಮಸ್ಯೆಯಾದರೆ ತಕ್ಷಣ ಮಾಹಿತಿ ನೀಡಿದರೆ ಕೇವಲ 15 ನಿಮಿಷಕ್ಕಿಂತ ಮೊದಲು ಸ್ಥಳಕ್ಕೆ ಭೇಟಿ ನೀಡುತ್ತೇವೆ. 100 ಅಥವಾ112 ನಂಬರ್‌ಗೆ ಕರೆ ಮಾಡಬಹುದು. ಇನ್ನೊಂದೆಡೆ ಹಬ್ಬದ ಆಫರ್‌ಗಳ ನೆಪದಲ್ಲಿ ಸೈಬ‌ರ್ ಕ್ರೈಂ ನಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್, ಬೆಸ್ಕಾಂ ಎಇಇ ರಮೇಶ್, ಜಿಲ್ಲಾ ಅಗ್ನಿಶಾಮಕ ದಳದ ಬಸವರಾಜ್, ತಹಸೀಲ್ದಾರ್ ಅನಿಲ್, ಚಿಂತಾಮಣಿ ಡಿವೈಎಸ್ಪಿ ಮುರಳೀಧರ್, ಮಾತನಾಡಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲಾ 6 ತಾಲೂಕಿನ ಹಿರಿಯ ಪೊಲೀಸ್ ಅಧಿಕಾರಿಗಳು, ವೃತ್ತ ನಿರೀಕ್ಷಕರಾದ ಸತ್ಯನಾರಾಯಣ, ಮಂಜುನಾಥ್‌, ಪಿಎಸೈಗಳಾದ ನಂಜುಂಡಪ್ಪ,ಹರೀಶ್ ಕುಮಾರ್,ಗುಣವತಿ ಮತ್ತಿತರರು ಇದ್ದರು.

---------

ಸಿಕೆಬಿ- 1 ಜಿಲ್ಲಾ ಮಟ್ಟದ ಶಾಂತಿಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿದರು.