ಭವಿಷ್ಯದ ಪ್ರಜೆಗಳ ನಿರ್ಮಾಣದ ಹೊಣೆ ಶಿಕ್ಷಕರದ್ದು: ಅಶೋಕ ಪಟ್ಟಣ

| Published : Sep 06 2024, 01:10 AM IST

ಸಾರಾಂಶ

ದೇಶದ ಭವಿಷ್ಯದ ಪ್ರಜೆಗಳ ನಿರ್ಮಾಣದ ಹೊಣೆ ಶಿಕ್ಷಕರ ಮೇಲಿದ್ದು, ಜವಾಬ್ದಾರಿಯಿಂದ ಉತ್ತಮ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕೆಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ದೇಶದ ಭವಿಷ್ಯದ ಪ್ರಜೆಗಳ ನಿರ್ಮಾಣದ ಹೊಣೆ ಶಿಕ್ಷಕರ ಮೇಲಿದ್ದು, ಜವಾಬ್ದಾರಿಯಿಂದ ಉತ್ತಮ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕೆಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಗುರುವಾರ ಪಟ್ಟಣದ ಬಸವ ಗಾರ್ಡನ್‌ದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಪವಿತ್ರವಾದದ್ದಲ್ಲದೆ ಗೌರವದ ವೃತ್ತಿಯಾಗಿದೆ. ಆದರೆ, ಕೆಲವು ಶಿಕ್ಷಕರು ದುಶ್ಚಟಗಳನ್ನು ಮಾಡುವುದರಿಂದ ಎಲ್ಲ ಶಿಕ್ಷಕರಿಗೆ ಅಗೌರವ ಉಂಟಾಗುತ್ತದೆ. ಶಿಕ್ಷಕರು ದುಶ್ಚಟಗಳಿಂದ ದೂರವಿದ್ದು, ವೃತ್ತಿ ಗೌರವ ಕಾಪಾಡಬೇಕೆಂದು ಕಿವಿಮಾತು ಹೇಳಿದರು.

ಶಿಕ್ಷಕರು ಸಮಯ ಪ್ರಜ್ಞೆ ಅಳವಡಿಸಿಕೊಂಡು ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಬರುವದಿಲ್ಲ ಎಂಬ ದೂರುಗಳಿದ್ದು, ಸರಿಯಾಗಿ ಕೆಲಸ ಮಾಡಬೇಕು. ಅಧಿಕಾರಿಗಳ ಭೇಟಿ ನೆಪದಲ್ಲಿ ಶಾಲೆಗಳಿಗೆ ಗೈರಾಗಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾದರೆ ಕ್ರಮ ಕೈಗೊಳ್ಳುವದು ಅನಿವಾರ್ಯವಾಗುತ್ತದೆ. ಅದಕ್ಕೆ ಶಿಕ್ಷಕರು ಅವಕಾಶ ನೀಡಬೇಡಿ ಎಂದು ಹೇಳಿದರು.

ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಬದ್ಧನಿದ್ದು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕಾಗಿ ತಾಲೂಕಿಗೆ ಮತ್ತಷ್ಟು ವಸತಿ ಶಾಲೆ ಆರಂಭಸಲು ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಹೇಳಿದ ಶಾಸಕರು, ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಶಿಕ್ಷಕರು ಶ್ರಮಿಸಬೇಕು. ಅಗತ್ಯವಾದರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇನೆ ಎಂದು ಭರವಸೆ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಲಾಯಿತು. ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಾಲಪ್ಪ ಮುನವಳ್ಳಿ, ದೈಹಿಕ ಶಿಕ್ಷಣ ಪರೀವಿಕ್ಷಕ ಆರ್.ಎಲ್. ಕನಕಪ್ಪನವರ ಇದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದತೀರ್ಥ ಜೋಶಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಜೆ.ಸಿ. ಶೀಲವಂತಮಠ ವಂದಿಸಿದರು.ಅದ್ದೂರಿ ಮೆರವಣಿಗೆ: ಶಿಕ್ಷಕರ ದಿನಾಚರಣೆ ನಿಮಿತ್ತ ಪಟ್ಟಣದ ವಿದ್ಯಾಚೇತನ ಆವರಣದಿಂದ ಸರ್ವಪಲ್ಲಿ ರಾಧಾಕೃಷ್ಣನ್‌ರ ಭಾವಚಿತ್ರದ ಮೆರವಣಿಗೆಯನ್ನು ವಿವಿಧ ವಾದ್ಯಮೇಳ ಹಾಗೂ ವಿದ್ಯಾರ್ಥಿನಿಯರು ಕುಂಭದೊಂದಿಗೆ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು.