ಸಾರಾಂಶ
ಮುಂಡರಗಿ: ವೀಣಾ ಪಾಟೀಲ ಈಗಾಗಲೇ ಸುಮಾರು ಸಾವಿರಕ್ಕೂ ಹೆಚ್ಚು ಲೇಖನ ಬರೆದಿದ್ದಾರೆ. ಅವುಗಳಲ್ಲಿಯ ಕೆಲ ಲೇಖನಗಳನ್ನು ಪುಸ್ತಕ ರೂಪದಲ್ಲಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಭಾನುವಾರ ಸಂಜೆ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಚೈತನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ತರಬೇತಿ ಸಂಸ್ಥೆಯ 15ನೇ ವಾರ್ಷಿಕೋತ್ಸವ ಮತ್ತು ಸಾಹಿತಿ ವೀಣಾ ಹೇಮಂತಗೌಡ ಪಾಟೀಲ ಬರೆದ ಮನುಕುಲ ತಿಲಕರು ಮತ್ತು ಅಸ್ಮಿತೆಯ ಅನುಭಾವ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಮನುಕುಲ ತಿಲಕರು ಮತ್ತು ಅಸ್ಮಿತೆಯ ಅನುಭಾವ ಈ ಎರಡು ಕೃತಿಗಳು ಲೇಖಕರ ಅನುಭಾವದ ಹೂರಣವಾಗಿವೆ. ಅನೇಕ ದಾರ್ಶನಿಕರನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಪರಿಚಯಿಸುವುದರೊಂದಿಗೆ ಅವರ ಜೀವನ ಆದರ್ಶ ಇಂದಿನ ಸಮಾಜ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಇಂತಹ ಗ್ರಂಥಗಳು ಅವಶ್ಯಕವಾಗಿವೆ. ಮುಂಡರಗಿಯಂತಹ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಚೈತನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ತರಬೇತಿ ಸಂಸ್ಥೆ ಕಟ್ಟಿಕೊಂಡು ಅನೇಕ ಜನೋಪಯೋಗಿ ಕಾರ್ಯ ಮಾಡುತ್ತಾ ಬಂದಿದ್ದಾರೆ. ಮುಂಬರುವ ವರ್ಷಗಳಲ್ಲಿ ಈ ಸಂಸ್ಥೆಯು ನಾಡಿನ ಅತ್ಯುತ್ತಮ ಸಂಸ್ಥೆಯಾಗಿ ಹೊರ ಹೊಮ್ಮಲಿ ಎಂದರು.
ಮನುಕುಲ ತಿಲಕರು ಕೃತಿ ಕುರಿತು ವಿಶ್ರಾಂತ ಪ್ರಾ.ಎಸ್.ಬಿ.ಕೆ. ಗೌಡರ ಮಾತನಾಡಿ, ಕಾರ್ತಿಕದ ಕತ್ತಲೆಯಲ್ಲಿ ಆಕಾಶದೀಪವಾಗಿ ನೀನು ಬಂದೆ ಎಂದು ವಿಶ್ವಗುರು ಬಸವಣ್ಣನವರ ಕುರಿತು ಕುವೆಂಪು ಬರೆದ ಸಾಲುಗಳನ್ನು ಕೆಂದ್ರಿಕೃತವಾಗಿಟ್ಟುಕೊಂಡು ಕ್ರಾಂತಿಕಾರಿ ಬಸವಣ್ಣ ಲೇಖನ ವಾಚಕನಿಗೆ ಭಿನ್ನರುಚಿ ನೀಡುವ ಸಾತ್ವಿಕ ಭಾವದ ವಿಷಯ ಈ ಗ್ರಂಥದ ತೂಕ ಇನ್ನಷ್ಟು ಹೆಚ್ಚಿಸಿದೆ. ಇದೊಂದು ಎಲ್ಲರೂ ಓದಲೇಬೇಕಾದ ಕೃತಿ. ಅನೇಕ ಮಹಾಪುರುಷರ ಪರಿಚಯ ಈ ಕೃತಿಯಲ್ಲಿ ವಿಭಿನ್ನವಾಗಿ ಉಲ್ಲೇಖಿಸಲಾಗಿದೆ ಎಂದರು.ಅಸ್ಮಿತೆಯ ಅನುಭಾವ ಕೃತಿ ಕುರಿತು ಪತ್ರಕರ್ತೆ ಸಾವಿತ್ರಿ ಮುಜುಮದಾರ್ ಮಾತನಾಡಿ, ಲೇಖಕರು ಈ ಗ್ರಂಥದ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಅನೇಕ ಸಮಸ್ಯೆ ಎತ್ತಿತೊರಿಸಿ ಅವುಗಳು ಸಮಾಜದಲ್ಲಿ ಸೃಷ್ಟಿಸುವ ವಾತಾವರಣ ಮತ್ತು ಅವುಗಳನ್ನು ಪರಿಹರಿಸುವ ವಿಧಾನ ಸವಿಸ್ತಾರವಾಗಿ ವಿವರಿಸಿದ್ದಾರೆ ಎಂದರು.
ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಂಡಲ ಕಲೆ ಪ್ರದರ್ಶನ ಉದ್ಯಮಿ ಭಾಗ್ಯಶ್ರೀ ಶಿವಬಸಪ್ಪ ಮೆಳ್ಳಿಗೇರಿ ಉದ್ಘಾಟಿಸಿದರು. ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ನೇತೃತ್ವವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ. ವಿ.ಕೆ. ಸಂಕನಗೌಡ್ರ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ಅಂಕಿತ ಪಾಟೀಲ, ವರ್ಷ ಪಾಟೀಲ, ನಿಶಾ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಹೇಮಂತಗೌಡ ಪಾಟೀಲ ಸ್ವಾಗತಿಸಿದರು. ವೀಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿ ಪಾಟೀಲ ನಿರೂಪಿಸಿದರು. ಡಾ.ನಿಂಗು ಸೊಲಗಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು.