ಧಾರವಾಡ:
ಹಲವು ದಶಕಗಳಿಂದ ಗೋವಾದಲ್ಲಿ ನಡೆಯುತ್ತಿದ್ದ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಅಲ್ಲಿನ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ನೆಪದಲ್ಲಿ ಸಿದ್ಧತೆ ನಡೆಸಿರುವುದನ್ನು ಖಂಡಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಪತ್ರ ಬರೆದಿದ್ದಾರೆ."ಗೋವಾ ಕನ್ನಡ ಮಾಧ್ಯಮ ಶಾಲೆಗೆ ಗೇಟ್‌ಪಾಸ್ " ಶೀರ್ಷಿಕೆ ಅಡಿ "ಕನ್ನಡಪ್ರಭ " ಸೋಮವಾರ ವಿಶೇಷ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಪ್ರಾಧಿಕಾರದ ಅಧ್ಯಕ್ಷರು, ಕೂಡಲೇ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸಚಿವರನ್ನೊಳಗೊಂಡ ನಿಯೋಗವೊಂದನ್ನು ಗೋವಾಕ್ಕೆ ಕಳುಹಿಸಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಕನ್ನಡಿಗರ ಶೈಕ್ಷಣಿಕ ಮತ್ತು ಸಾಂವಿಧಾನಿಕ ಭಾಷಾ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಗೋವಾ, ಕೇರಳಂ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಗಡಿಭಾಗಗಳಲ್ಲಿರುವ ಸಾವಿರಾರು ಕನ್ನಡಿಗ ಮಕ್ಕಳು 1ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ನಂತರ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ಪರಂಪರೆ ಇದೆ. ಈ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮುಂದಿನ ಉನ್ನತ ಶಿಕ್ಷಣಕ್ಕೆ ಕನ್ನಡ ಮಾಧ್ಯಮದಲ್ಲಿ ಅವಕಾಶಗಳಿರದ ಕಾರಣ ವಿದ್ಯಾರ್ಥಿಗಳು ಬದಲಾದ ಪರಸ್ಥಿತಿಗೆ ಹೊಂದಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಕನ್ನಡಿಗರಲ್ಲಿ ಆತಂಕ ಹೆಚ್ಚಿಸಿದೆ. ಇದು ಆ ರಾಜ್ಯದ ಕನ್ನಡ ಮಾಧ್ಯಮ ಶಿಕ್ಷಣದ ಭವಿಷ್ಯದ ಮೇಲೆ ಮರಣ ಶಾಸನವನ್ನು ಬರೆದಂತಾಗಿದೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.ಕೇಂದ್ರಕ್ಕೂ ಪತ್ರ:
ಗೋವಾದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸಂಬಂಧಿಸಿದ ತೀವ್ರ ತೊಂದರೆದಾಯಕ ಬೆಳವಣಿಗೆಗಳ ಬಗ್ಗೆಯೂ ಬಿಳಿಮಲೆ ಅವರು ಪತ್ರದ ಮುಖೇನ ಕೇಂದ್ರ ಶಿಕ್ಷಣ ಸಚಿವರ ಗಮನ ಸೆಳೆದಿದ್ದಾರೆ. ಗೋವಾದಲ್ಲಿ ಕನ್ನಡದ ಶಾಲೆಗಳನ್ನು ಮುಚ್ಚುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಇದು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ತಲೆಮಾರುಗಳಿಂದ ಗೋವಾದ ಕನ್ನಡ ಮಾತನಾಡುವ ಕುಟುಂಬಗಳು ಮಾತೃಭಾಷಾ ಶಿಕ್ಷಣದ ಮೂಲಕ ತಮ್ಮ ಭಾಷೆ, ಸಂಸ್ಕೃತಿ ಮತ್ತು ಗುರುತನ್ನು ಸಂರಕ್ಷಿಸಿವೆ. ಈಗ ಎಲ್ಲದಕ್ಕೂ ಹೊಡೆತ ಬಿದ್ದಂತಾಗಿದೆ. ಆದ್ದರಿಂದ ಗೋವಾದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ರಕ್ಷಿಸಲು ಮತ್ತು ಅಲ್ಲಿನ ಕನ್ನಡಿಗರ ಹಕ್ಕುಗಳನ್ನು ರಕ್ಷಿಸಲು ಕೇಂದ್ರವು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಬಿಳಿಮಲೆ ಮನವಿ ಮಾಡಿದ್ದಾರೆ.