ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ರೈತರ ವಿಚಾರದಲ್ಲಿ ಸಿಎಂ ಸ್ವಲ್ಪ ತಡವಾಗಿ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಅಂತೂ ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರ್‌ಗಳಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿ:
ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ರೈತರ ವಿಚಾರದಲ್ಲಿ ಸಿಎಂ ಸ್ವಲ್ಪ ತಡವಾಗಿ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಅಂತೂ ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರ್‌ಗಳಿಗೆ ಪತ್ರ ಬರೆದಿದ್ದಾರೆಂದು ತಿಳಿಸಿದ್ದಾರೆ.
ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ ಎನ್‌ಸಿಸಿಎಫ್ ಮತ್ತು ನಾಫೇಡ್ ಜತೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರ್‌ಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಮೂಲಕ ಈಗಲಾದರೂ ಬುದ್ಧಿ ಬಂದಿತಲ್ಲ ಎಂದಿರುವ ಜೋಶಿ, ಇಷ್ಟು ದಿನ ಪ್ರತಿಯೊಂದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತಿದ್ದ ಸಿಎಂಗೆ ಈಗ ಜ್ಞಾನೋದಯವಾಗಿದೆ. ರಾಜ್ಯ ಸರ್ಕಾರಕ್ಕೆ ತನ್ನ ಕಾರ್ಯದ ಬಗ್ಗೆ ಅರಿವಾದಂತಿದೆ ಎಂದಿದ್ದಾರೆ.ಮೆಕ್ಕೆಜೋಳ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು. ಸಿದ್ದರಾಮಯ್ಯ ಅವರು ಇನ್ನಾದರೂ ರೈತರಲ್ಲಿ ಇಲ್ಲಸಲ್ಲದ ಗೊಂದಲ ಸೃಷ್ಟಿಸುವುದನ್ನು ಬಿಡಲಿ. ತಮ್ಮ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚುವುದಕ್ಕಾಗಿ ಕೇಂದ್ರ ಸರ್ಕಾರದತ್ತ ಬೆರಳು ತೋರುವುದನ್ನು ನಿಲ್ಲಿಸಲಿ. ರಾಜ್ಯದಲ್ಲಿ ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಸದ್ವಿನಿಯೋಗ ಆಗುವಂತೆ ಪಾರದರ್ಶಕ ಆಡಳಿತ ನಿರ್ವಹಿಸಲಿ ಎಂದು ಸಲಹೆ ಮಾಡಿದ್ದಾರೆ.