ಬಸವಣ್ಣನವರ ವಚನ ಅರ್ಥೈಸಿಕೊಂಡರೇ ಬದುಕನ್ನು ಉತ್ತಮ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : May 01 2025, 12:49 AM IST

ಬಸವಣ್ಣನವರ ವಚನ ಅರ್ಥೈಸಿಕೊಂಡರೇ ಬದುಕನ್ನು ಉತ್ತಮ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಕಲ್ಪನೆ ಬಸವ ತತ್ವವೇ ಆಗಿದೆ. ಸಂವಿಧಾನ ಒಪ್ಪಿಕೊಂಡವರು ಬಸವಣ್ಣನವರನ್ನು ಒಪ್ಪಿಕೊಳ್ಳುತ್ತಾರೆ. ಬಸವಣ್ಣನವರು ಅನುಭವ ಮಂಟಪದಲ್ಲಿ ತೆಗೆದುಕೊಂಡ ನಿರ್ಣಾಯಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರನ್ನು ಜಾತಿಗೆ ಸೀಮಿತಗೊಳಿಸುವುದನ್ನು ಮೊದಲು ಬಿಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಶ್ವದ ಜನರು ಬಸವಣ್ಣನವರ ವಚನಗಳನ್ನು ಅರ್ಥೈಸಿಕೊಂಡರೇ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ನಡೆದ ವಿಶ್ವಗುರು ಬಸವ ಜಯಂತಿಯಲ್ಲಿ ಮಾತನಾಡಿ, ಬಸವಣ್ಣರನ್ನು ಅರಿಯದವರು ಬಸವ ತತ್ವದಲ್ಲಿ ಇದ್ದರೂ ಪ್ರಯೋಜನವಿಲ್ಲ. ಬಸವಣ್ಣರನ್ನು ಅನುಸರಿಸದವರು ವಿಶ್ವಮಾನವನಾಗಲು ಸಾಧ್ಯವಿಲ್ಲ. ವಚನದ ಮೂಲಕ ಸಮಾಜದಲ್ಲಿ ಬೆಳಕು ಚೆಲ್ಲಿದ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಬದುಕಿಗೆ ಅವಶ್ಯಕವಾದ ವಿಚಾರಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಜ್ಞಾನ ಹೊಂದಿದ್ದರು. ಬಸವಣ್ಣ ಭೂಮಿಗೆ ಜೀವರಾಶಿಗೆ ಮಾರ್ಗದರ್ಶನಕ್ಕೆ ಬಂದ ದೇವ ಮಾನವರಾಗಿದ್ದಾರೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಕಲ್ಪನೆ ಬಸವ ತತ್ವವೇ ಆಗಿದೆ. ಸಂವಿಧಾನ ಒಪ್ಪಿಕೊಂಡವರು ಬಸವಣ್ಣನವರನ್ನು ಒಪ್ಪಿಕೊಳ್ಳುತ್ತಾರೆ. ಬಸವಣ್ಣನವರು ಅನುಭವ ಮಂಟಪದಲ್ಲಿ ತೆಗೆದುಕೊಂಡ ನಿರ್ಣಾಯಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರನ್ನು ಜಾತಿಗೆ ಸೀಮಿತಗೊಳಿಸುವುದನ್ನು ಮೊದಲು ಬಿಡಬೇಕು. ಮಹಾನ್ ನಾಯಕರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸುತ್ತೂರು ಕ್ಷೇತ್ರದ ಆದಿ ಜಗದ್ಗುರು ಶ್ರೀಶಿವರಾತ್ರಿಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವವನ್ನು ಮಳವಳ್ಳಿಯಲ್ಲಿ ಆಚರಿಸಲು ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿಗಳು ಅನುಮತಿ ನೀಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾನು ಮಠದ ಭಕ್ತನೊಬ್ಬನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಜಾತ್ಯತೀತವಾಗಿ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು.

ಮುಡುಕನಪುರ ಹಲವಾರ ಮಠದ ಷಡಕ್ಷರ ದೇಶಿಕೇಂದ್ರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಸಮಾಜದ ಆಸ್ಪೃಶ್ಯತೆಯನ್ನು ನಿವಾರಿಸಿ ಸಮಾನತೆಗಾಗಿ ಶ್ರಮಿಸಿದ್ದರು. 980 ವರ್ಷಗಳ ಹಿಂದೆ ಬಸವಣ್ಣನವರು ಕಟ್ಟಿಕೊಂಡಿದ್ದ ಅನುಭವ ಮಂಟಪದಲ್ಲಿ ದೊಡ್ಡ ಪಡೆಯನ್ನು ಕಟ್ಟಿ ಆಲೋಚನೆ, ಅನಿಸಿಕೆ ಹೇಳಿಕೊಳ್ಳುವ ಮುಕ್ತವಾಗಿ ಮಾತನಾಡಲು ಸೂಕ್ತ ವೇದಿಕೆಯಾಗಿತ್ತು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಬಸವಣ್ಣನವರ ಪುತ್ಥಳಿಯನ್ನು ಪಟ್ಟಣ ತಾಲೂಕು ಪಂಚಾಯ್ತಿ ಆವರಣದಿಂದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.

ವೇದಿಕೆಯಲ್ಲಿ ತಹಸೀಲ್ದಾರ್ ಲೊಕೇಶ್, ತಾಪಂ ಇಒ ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ. ಉಮಾ, ಡಿವೈಎಸ್ಪಿ ಕೃಷ್ಣಪ್ಪ, ಮುಖಂಡರಾದ ದೊಡ್ಡಯ್ಯ, ಸಿ.ಪಿ.ರಾಜು, ಪ್ರಕಾಶ್, ವಿಶ್ವಾಸ್, ಅಂಬರೀಶ್, ಬಸವರಾಜು, ಆನಂದ್ ಸುಷ್ಮಾ, ಸುಜಾತ ಕೆ.ಎಂ ಪುಟ್ಟು, ವೃಷಬೇಂದ್ರ, ಪುಟ್ಟಸ್ವಾಮಿ, ಮಾದು ಸೇರಿದಂತೆ ಇತರರು ಇದ್ದರು.