ಅಹಂಕಾರ ತೊರೆದಾಗ ಜೀವನ ಸಾರ್ಥಕ: ಎನ್.ಎಂ.ಶ್ರೀಧರ್

| Published : May 13 2024, 12:01 AM IST

ಸಾರಾಂಶ

ನಾವು ನಮ್ಮ ದೇಶದ ಮತ್ತು ಇತರೆ ದೇಶಗಳ ನಾಗರೀಕತೆಗಳ ಇತಿಹಾಸವನ್ನು ನೋಡಿದರೆ, ಕೆಲವು ವ್ಯಕ್ತಿಗಳ ಅಹಂಕಾರದಿಂದಾಗಿ ಯುದ್ದಗಳು ನಡೆದು ಸಾವು, ನೋವು ಸಂಭವಿಸಿವೆ. ಅಲ್ಲದೆ ನಾಗರೀಕತೆ ಮತ್ತು ದೇಶಗಳೇ ನಿರ್ಮೂಲನೆಯಾಗಿವೆ. ನಮ್ಮ ಸಮಾಜದ ಸುತ್ತಮುತ್ತ ಸಹ ಅನೇಕ ಸಮೃದ್ಧ ಕುಟುಂಬಗಳು ಅಹಂಕಾರದಿಂದ ನಾಶವಾಗಿವೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಕೃತಿ ಮುಂದೆ ಮನುಷ್ಯ ತುಂಬಾ ಚಿಕ್ಕವನು. ಆದರೂ ಮನುಷ್ಯನ ಅಹಂಕಾರ ಬಹಳ ದೊಡ್ಡದು. ನಾನು, ನನ್ನದು, ನನ್ನಿಂದಲೇ ಎಂದು ಬೀಗುತ್ತಾನೆ. ಅಹಂಕಾರ ಪಡುತ್ತಾನೆ. ಇಂತಹ ಅಹಂಕಾರ ತೊರೆದಾಗಲೇ ಜೀವನ ಸಾರ್ಥಕ ಎಂದು ಪರೋಪಕಾರಂ ಕುಟುಂಬದ ಕಟ್ಟಾಳು ಎನ್.ಎಂ. ಶ್ರೀಧರ್ ಹೇಳಿದರು.

ಪರೋಪಕಾರಂ ಕುಟುಂಬದ ವತಿಯಿಂದ ಭಾನುವಾರ ಇಲ್ಲಿನ ಮಲ್ಲೇಶ್ವರ ನಗರದ ಝೂನ್ಸಿ ರಾಣಿ ಲಕ್ಷ್ಮಿಬಾಯಿ ಪಾರ್ಕ್‍ನಲ್ಲಿ 775ನೇ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ನೆಟ್ಟ ಗಿಡಗಳ ಆರೈಕೆ ಹಾಗೂ ನೀರುಣಿಸುವಿಕೆ ಸಂದರ್ಭದಲ್ಲಿ ಪರೋಪಕಾರಂ ಕುಟುಂಬದ ಸದಸ್ಯೆ ಅನಿತಾ ಅನಿಲ್ ಹೆಗ್ಗಡೆ ಅವರ ಹುಟ್ಟುಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಾವು ನಮ್ಮ ದೇಶದ ಮತ್ತು ಇತರೆ ದೇಶಗಳ ನಾಗರೀಕತೆಗಳ ಇತಿಹಾಸವನ್ನು ನೋಡಿದರೆ, ಕೆಲವು ವ್ಯಕ್ತಿಗಳ ಅಹಂಕಾರದಿಂದಾಗಿ ಯುದ್ದಗಳು ನಡೆದು ಸಾವು, ನೋವು ಸಂಭವಿಸಿವೆ. ಅಲ್ಲದೆ ನಾಗರೀಕತೆ ಮತ್ತು ದೇಶಗಳೇ ನಿರ್ಮೂಲನೆಯಾಗಿವೆ. ನಮ್ಮ ಸಮಾಜದ ಸುತ್ತಮುತ್ತ ಸಹ ಅನೇಕ ಸಮೃದ್ಧ ಕುಟುಂಬಗಳು ಅಹಂಕಾರದಿಂದ ನಾಶವಾಗಿವೆ. ಒಬ್ಬ ವ್ಯಕ್ತಿಯು ಅಹಂಕಾರದ ಲಕ್ಷಣಗಳನ್ನು ಜಯಿಸಲು ಸಾಧ್ಯವಾದರೆ ಸುಂದರ ಕುಟುಂಬ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಅನೇಕ ಯುದ್ಧಗಳಿಗೆ ವ್ಯಕ್ತಿಯ ಅಹಂಕಾರ ಮತ್ತು ದುರಹಂಕಾರ ಕಾರಣವಾಗಿದೆ. ದುರ್ಯೋಧನನ ಅಹಂಕಾರದಿಂದಾಗಿ ಇಡೀ ಕೌರವ ಕುಲವೇ ನಾಶವಾಯಿತು. ಅಂತೆಯೇ ಮಹಾಯುದ್ಧಗಳ ಸಮಯದಲ್ಲಿ ಸಾವು ಮತ್ತು ವಿನಾಶವನ್ನು ನಾವು ನೋಡುತ್ತೇವೆ. ಇವು ಕೆಲವೇ ಕೆಲವು ವ್ಯಕ್ತಿಗಳ ಅಹಂಕಾರದ ಫಲಿತಾಂಶಗಳೂ ಆಗಿವೆ ಎಂದು ವಿವರಿಸಿದರು.

ಮಕ್ಕಳು ತಮ್ಮ ತಂದೆ-ತಾಯಿಯಿಂದ ಆರೈಕೆ ಅಪೇಕ್ಷಿಸುವಂತೆ, ಗಿಡಗಳು ಸಹ ನೆಟ್ಟವರಿಂದ ಆರೈಕೆಯನ್ನು ಅಪೇಕ್ಷಿಸುತ್ತವೆ. ನಾವು ಹೆತ್ತ ಮಕ್ಕಳು ಮುಂದೆ ನಮ್ಮನ್ನು ನೋಡುತ್ತಾರೋ ಇಲ್ಲವೋ, ಆದರೆ ನೆಟ್ಟ ಗಿಡಗಳ ಆರೈಕೆ ಮಾಡಿದರೆ ಖಂಡಿತ ಅವು ನಮ್ಮನ್ನಷ್ಟೇ ಅಲ್ಲ, ಇಡೀ ಸಮಾಜವನ್ನು ದೀರ್ಘ ಕಾಲ ಪೋಷಿಸುತ್ತವೆ. ಆದ್ದರಿಂದ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮತ್ತಿತರೆ ಶುಭ ಸಂದರ್ಭಗಳಲ್ಲಿ ಮನೆ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕಿದೆ. ಗಿಡ-ಮರಗಳ ಆರೈಕೆಯಿಂದ ಪುಣ್ಯ ಪಡೆಯಬಹುದೆಂದರು.

ಎನ್.ಎಂ.ಲೀಲಾಬಾಯಿ , ಅನಿತಾ, ಅನಿಲ್ ಹೆಗ್ಗಡೆ, ಎನ್.ಎಂ.ರಾಘವೇಂದ್ರ, ಪ್ರಗತಿಪರ ಕೃಷಿಕ ಓಂ ಪ್ರಕಾಶ್, ಆರ್.ಕಿರಣ್ , ರಾಯಲ್ ಮೆಡಿಕಲ್ಸ್‌ನ ಲೋಹಿತ್, ಜೋಡಿಯಾಕ್ ಪ್ರಕಾಶ್, ದೀಪಾ ಶ್ರೀಧರ್, ಶೈಲ ರಾಘವೇಂದ್ರ, ಶ್ರೇಯಾ ಹೆಗ್ಗಡೆ, ವೈಷ್ಣವಿ, ವೈಶಾಖ, ಚೆರಿತಾ , ವಿಜಯ ಕಾರ್ತಿಕ್, ಉಜ್ವಲ್ ಹೆಗ್ಗಡೆ, ಶ್ರೀಯಾನ್, ವೇದವ್ಯಾಸ ಮತ್ತಿತರರು ಭಾಗವಹಿಸಿದ್ದರು.