ಕನ್ನಡಪ್ರಭ ವಾರ್ತೆ ಜಮಖಂಡಿ

ಕನ್ನಡ ಮಣ್ಣಿನಲ್ಲಿ 12ನೇ ಶತಮಾನದ ಬಸವಾದಿ ಶಿವಶರಣರು ನಡೆಸಿದ ಚಳವಳಿಯ ಉತ್ಪನ್ನವಾಗಿ ಹುಟ್ಟಿದ ಧರ್ಮ ಲಿಂಗಾಯತ ಧರ್ಮವಾಗಿದೆ. ರಾಜ್ಯದಾದ್ಯಂತ ಐದು ಸಾವಿರ ಲಿಂಗಾಯತ ಮಠಗಳಿದ್ದರೂ ಲಿಂಗಾಯತ ಧರ್ಮದ ಆಚರಣೆ ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ ಎಂದು ಚಿಂತಕ ಡಾ.ಜೆ.ಎಸ್. ಪಾಟೀಲ ಹೇಳಿದರು.ಬಸವ ಜಯಂತಿ ನಿಮಿತ್ತ ನಗರದ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಆರು ದಿನಗಳ ಜಮಖಂಡಿ ಓಲೆಮಠದ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಸಂಜೆಯ ಕಾರ್ಯಕ್ರಮದಲ್ಲಿ ಅವರು ಲಿಂಗಾಯತ ಚಳವಳಿ ಸಮಗ್ರ ಚಿಂತನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಾತಿಯ ಅಸಮಾನತೆ ಹೋಗಲಾಡಿಸುವುದು, ಮಂದಿರಗಳಿಂದ ಆಗುತ್ತಿದ್ದ ಶೋಷಣೆ ತಪ್ಪಿಸಲು ಇಷ್ಟಲಿಂಗ ಕೊಡುವುದು, ಆರ್ಥಿಕ ಸಮಾನತೆಗಾಗಿ ಕಾಯಕ, ದಾಸೋಹ ಆರ್ಥಿಕ ಸೂತ್ರ ಜಾರಿಗೊಳಿಸಲು, ಧಾರ್ಮಿಕ ಸಮಾನತೆ ಮತ್ತು ಲಿಂಗ ಸಮಾನತೆ ತರುವುದು ಚಳವಳಿಯ ಮುಖ್ಯ ಉದ್ದೇಶವಾಗಿತ್ತು ಎಂದರು.

ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಷಯ ವಾಸನೆಯಿಂದ ದೂರ ಉಳಿದು, ಇದ್ದುದರಲ್ಲಿಯೇ ಸಂತೃಪ್ತ ಜೀವನ ನಡೆಸಬೇಕು ಎಂದು ಆಶೀರ್ವಚನ ನೀಡಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ, ಆಲಬಾಳದ ಪ್ರಗತಿಪರ ರೈತ ಸೋಮನಗೌಡ ಪಾಟೀಲ, ಭಾಗ್ಯಶ್ರೀ ಕೋಟಿ, ಜ್ಯೋತಿ ಕಟಗಿ ಮಾತನಾಡಿದರು. ಕಲ್ಯಾಣ ಮಠದ ಗೌರಿಶಂಕರ ಸ್ವಾಮೀಜಿ, ಅರ್ಜುಣಗಿಯ ಗುರುದೇವ ದೇವರು ಸಾನ್ನಿಧ್ಯ ವಹಿಸಿದ್ದರು. ಓಲೆಮಠದ ಆನಂದ ದೇವರು ನೇತೃತ್ವ ವಹಿಸಿದ್ದರು.

ಸುರೇಶಗೌಡ ಪಾಟೀಲ, ರವಿ ತೇಲಿ, ವರ್ಧಮಾನ ನ್ಯಾಮಗೌಡ, ಈಶ್ವರ ಕರಬಸನವಂತರ, ತಳವಾರ ಸಮಾಜದ ಅಧ್ಯಕ್ಷ ಕೃಷ್ಣಾ ತಳವಾರ, ಪತ್ರಕರ್ತ ಮಲ್ಲೇಶ ಆಳಗಿ, ನಾಗಪ್ಪ ಮುತ್ತಕ್ಕನವರ, ಸಿದ್ದರಾಮಯ್ಯ ಗೋಠೆ, ಕಾಡಪ್ಪ ದೇಸಾಯಿ, ಶ್ರೀಶೈಲ ಗೊಂಗನವರ, ಶ್ರೀಶೈಲ ಮಠಪತಿ, ಸದಾಶಿವ ಕವಟಗಿ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ಜತ್ತಿ, ಶ್ವೇತಾ ಅರಕೇರಿ, ಶಿವಗಂಗಾ ಕಟಗಿ, ನಂದಿನಿ ಬಾಂಗಿ, ರೇಖಾ ತೆಲಬಕ್ಕನವರ, ಪಾರ್ವತಿ ಕೊಣ್ಣೂರ ಇದ್ದರು.


ಹೇಮಾ ಮಠಪತಿ ವಿರಚಿತ ಆಡಿದ ಅಂಗಳ ಕವನ ಸಂಕಲನ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಸಾನಿಯಾ ಹುನಗುಂದ ಭರತ ನಾಟ್ಯ ಪ್ರದರ್ಶಿಸಿದರು. ಆನಂದ ಬ್ಯಾಳಿ, ಹನುಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಬಿಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಏಗಪ್ಪ ಸವದಿ ದಾಸೋಹ ಸೇವೆ ಸಲ್ಲಿಸಿದರು. ಎಸ್.ಎಚ್. ಮಠಪತಿ, ಶಿವಾನಂದ ಕಲ್ಯಾಣಿ ನಿರೂಪಿಸಿದರು.