ಕನ್ನಡಪ್ರಭ ವಾರ್ತೆ ಕಮತಗಿ

ಪಿ.ಲಂಕೇಶ ಅವರು ಲಂಕೇಶ ಪತ್ರಿಕೆಯ ಮೂಲಕ ಅನೇಕ ಹೊಸ ಯುವ ಬರಹಗಾರ, ಸಾಹಿತಿ, ಕವಿಗಳನ್ನು ಪ್ರೋತ್ಸಾಹಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು ಎಂದು ಸಾಹಿತಿ ಡಾ ಪ್ರಕಾಶ ಗ ಖಾಡೆ ಹೇಳಿದರು.

ಪಟ್ಟಣದಲ್ಲಿನ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ, ಚಕೋರ ಸಾಹಿತ್ಯ ವೇದಿಕೆ ಬಾಗಲಕೋಟೆ ಹಾಗೂ ಯೋಗಿನಿದೇವಿ ಆರ್. ಪಾಟೀಲ ಗ್ರಾಮೀಣ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಂಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪಿ.ಲಂಕೇಶ ಅವರ ಬದುಕು ಮತ್ತು ಬರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಲಂಕೇಶ ಅವರು ತಮ್ಮ ವಿಶಿಷ್ಟ ಬರವಣಿಗೆ ಶೈಲಿ, ನಿಷ್ಠುರತೆ ಮತ್ತು ಸಮಾಜದ ಜ್ವಲಂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಸಾಹಿತಿಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಅಲ್ಲದೆ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಕೂಡ ತಮ್ಮದೆ ಬರವಣಿಗೆ ಶೈಲಿ ಮೂಲಕ ಕ್ರಾಂತಿ ಮಾಡಿದ್ದರು. ಇವರು ಬರೆದಿರುವ ಕಾದಂಬರಿ, ಕಥೆ, ಕಾವ್ಯ, ಸಾಹಿತ್ಯ ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಬೀಳಗಿ ಪತ್ರಕರ್ತ ಕಿರಣ ಬಾಳಾಗೋಳ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪಿ.ಲಂಕೇಶ ಅವರು ಕನ್ನಡ ಸಾಹಿತ್ಯ ಮತ್ತು ಪತ್ರಿಕೆ, ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ಮೇರು ವ್ಯಕ್ತಿತ್ವ ಹೊಂದಿದ್ದರು. ಕವಿ, ಕಥೆಗಾರ, ನಾಟಕಕಾರ, ಅಂಕಣಕಾರ ಮತ್ತು ಚಲನಚಿತ್ರ ನಿರ್ದೇಶಕರಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿದ್ದಾರೆ. ಯುವಕರಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಅವರನ್ನು ತಮ್ಮ ಪತ್ರಿಕೆಯ ಮೂಲಕ ಬೆಳೆಸಿದರು ಎಂದರು.


ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ವಿ.ಆರ್. ಮಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಐ. ಮೋಮಿನ್, ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಆಢಳಿತಾಧಿಕಾರಿ ಎ.ಎಚ್. ಕಲ್ಯಾಣಶೆಟ್ಟಿ, ಉಪನ್ಯಾಸಕರು, ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಇದ್ದರು.