ಸಮಸ್ಯೆ ಆಲಿಸಿ, ಪರಿಶೀಲಿಸಿ ಪರಿಹರಿಸಲು ಸೂಚನೆ

| Published : May 07 2025, 12:48 AM IST

ಸಾರಾಂಶ

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸುವಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸುವಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಮರಳೂರು ದಿಣ್ಣೆ ಕೊಳಚೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಅಲ್ಲಿನ ನಿವಾಸಿಗಳು ಕೊಳಚೆ ಸೇರಿದಂತೆ ಹಲವು ಸಮಸ್ಯೆಗಳನ್ನು ನಿಸಾರ್ ಅಹಮದ್ ಅವರ ಮುಂದೆ ಹೇಳಿಕೊಂಡರು. ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಬಳಿಕ ಅಲ್ಲೇ ರಸ್ತೆ ಬದಿಯ ಬೀದಿ ವ್ಯಾಪಾರಸ್ಥರ ಬಳಿ ತೆರಳಿ ವ್ಯಾಪಾರ ಹೇಗೆ ನಡೆಯುತ್ತಿದೆ? ಸ್ಟ್ರೀಟ್ ವೆಂಡರ್ ಕಾರ್ಡ್ ಪಡೆದುಕೊಂಡು ಸಾಲ ಸೌಲಭ್ಯ ಪಡೆದುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಹಣ್ಣಿನ ವ್ಯಾಪಾರಿಯೊಬ್ಬರು ನಮಗೆ ಸ್ಟ್ರೀಟ್ ವೆಂಡರ್ ಕಾರ್ಡ್ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿಕೊಂಡರು. ತಕ್ಷಣವೇ ಸ್ಟ್ರೀಟ್ ವೆಂಡರ್ ಯೋಜನೆ ಬಗ್ಗೆ ಅವರಿಗೆ ತಿಳಿ ಹೇಳಿ, ಇವರಿಗೆ ಸಾಲ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಬಳಿಕ ರಾಜೀವ್ ಗಾಂಧಿ ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಅಲ್ಪಸಂಖ್ಯಾತರ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ವ್ಯವಸ್ಥೆ ಹೇಗಿದೆ? ಎಂಬೆಲ್ಲಾ ಮಾಹಿತಿ ಪಡೆದ ನಿಸಾರ್ ಅಹಮದ್ ಅಡುಗೆ ಕೊಠಡಿಗೆ ತೆರಳಿದರು. ಈ ವೇಳೆ ಅಡುಗೆ ಕೊಠಡಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ತಯಾರು ಮಾಡಿದ್ದ ಅಡುಗೆಯನ್ನು ಪರಿಶೀಲಿಸಿದರು. ಏನು ಸಾಂಬರ್ ಮಾಡಿದ್ದೀರಾ? ಅಡುಗೆ ಮಾಡುವುದಕ್ಕೆ ಪಾತ್ರೆಗಳೆಲ್ಲಾ ಸಮರ್ಪಕವಾಗಿ ಇದಾವಾ ಎಂಬೆಲ್ಲಾ ಪ್ರಶ್ನೆ ಮಾಡಿ ಮಾಹಿತಿ ಪಡೆದುಕೊಂಡರು. ಮಕ್ಕಳ ಕಲಿಕೆಗೆ ಪೂರಕವಾದ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೈನ್ ಭವನ, ಮರುಳೂರು ದಿಣ್ಣೆ ಸ್ಲಂ ಪ್ರದೇಶ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಮರಳೂರು ದಿಣ್ಣೆಯ ಸ್ಲಂ ಪ್ರದೇಶದಲ್ಲಿ ಕೆಲವೊಂದು ಸಮಸ್ಯೆಗಳಿದ್ದವು. ಅವುಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಈ ವೇಳೆ ಪ್ರಧಾನಮಂತ್ರಿಗಳ 15 ಅಂಶಗಳ ಅನುಷ್ಟಾನ ಸಮಿತಿಯ ಜಿಲ್ಲಾ ಸದಸ್ಯರಾದ ಮಹಮದ್ ಖಲೀಮ್, ಜೆಫಿನ್ ಜಾಮ್, ಕಲೀಂಉಲ್ಲಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಶಬ್ಬೀರ್ ಅಹಮದ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್ ಅಲೀಉಲ್ಲಾ ಸೇರಿದಂತೆ ಇತರರು ಇದ್ದರು.