ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲೇ ಕರಾವಳಿ ಕರ್ನಾಟಕ ಜಿಲ್ಲೆಗಳ ಜನಪ್ರಿಯ ಸಾಂಪ್ರದಾಯಿಕ ಜಾನಪದ ನೃತ್ಯ ಪ್ರಕಾರ ಯಕ್ಷಗಾನದ ಸಮ್ಮೇಳನ ಆಯೋಜನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಕೋಟಿ ರು. ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲೇ ಕರಾವಳಿ ಕರ್ನಾಟಕ ಜಿಲ್ಲೆಗಳ ಜನಪ್ರಿಯ ಸಾಂಪ್ರದಾಯಿಕ ಜಾನಪದ ನೃತ್ಯ ಪ್ರಕಾರ ಯಕ್ಷಗಾನದ ಸಮ್ಮೇಳನ ಆಯೋಜನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಕೋಟಿ ರು. ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

2023 ಫೆಬ್ರವರಿ 11-12ರಂದು ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಉಡುಪಿ ಜಿಲ್ಲಾಡಳಿತ ಜಂಟಿಯಾಗಿ ಯಕ್ಷಗಾನ ಸಮ್ಮೇಳನ ಆಯೋಜಿಸಿದ್ದವು. ಈ ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ನಡೆಸಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಆದರೆ, ಈವರೆಗೂ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಜೆಟ್‌ನಲ್ಲಿ ಸಮ್ಮೇಳನಕ್ಕಾಗಿ ಅನುದಾನ ಸಿಗಬಹುದೆಂಬ ನಿರೀಕ್ಷೆ ಅಕಾಡೆಮಿಯದ್ದು.

ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಯಕ್ಷಗಾನ ಎಂಬ ಎರಡು ಬಗೆಯಿದ್ದು ಮೂಡಲಪಾಯವು ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಬಳ್ಳಾರಿ, ಚಾಮರಾಜನಗರ ಕೋಲಾರ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಪಡುವಲಪಾಯ ಯಕ್ಷಗಾನ ಮಂಗಳೂರು, ಉಡುಪಿ, ಉತ್ತರ ಕನ್ನಡ, ಧಾರವಾಡ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ಶಿವಮೊಗ್ಗ, ಗಡಿನಾಡು ಜಿಲ್ಲಾಯಾದ ಕಾಸರಗೋಡು ಮುಂತಾದೆಡೆ ಪ್ರಚಲಿತದಲ್ಲಿವೆ.

ಅನುದಾನದ ಕೊರತೆ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊರೋನಾಗೂ ಮೊದಲು ಪ್ರತಿ ಅಕಾಡೆಮಿಗಳ ಕಾರ್ಯಚಟುವಟಿಕೆಗಳಿಗೆಂದು ತಲಾ ಒಂದು ಕೋಟಿ ರು.ಅನುದಾನ ನೀಡುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಕಾಡೆಮಿಗಳಿಗೆ ತಲಾ ಕೇವಲ 80 ಲಕ್ಷ ರು.ಅನುದಾನ ಮಾತ್ರ ನೀಡುತ್ತಿದೆ. ಇದರಲ್ಲೇ ಅಕಾಡೆಮಿಗಳು ನಿರಂತರ ಕಾರ್ಯ ಚಟುವಟಿಕೆ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿವೆ.

ಜ.8ರಂದು ಸಭೆ:

ಈ ಕಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಪ್ರತಿ ವರ್ಷ ಸಮಗ್ರ ಯಕ್ಷಗಾನ ಸಮ್ಮೇಳನ ನಡೆಸಬೇಕೆಂಬ ಒತ್ತಾಯವೂ ಇದೆ. ಅದಕ್ಕೆ ಪೂರಕವಾಗಿ 2026ರ ಬಜೆಟ್‌ನಲ್ಲಿಯಾದರೂ ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ವಿಶೇಷ ಅನುದಾನ ನೀಡುವಂತೆ ಮತ್ತೊಮ್ಮೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ಜ.8ರಂದು ನಡೆಯಲಿರುವ ಅಕಾಡೆಮಿಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಕಾಡೆಮಿ ಮೂಲಗಳು ತಿಳಿಸಿವೆ.

- ಕೋಟ್‌-

ಹಣ ಕೊಟ್ಟರೆ ಸಮ್ಮೇಳನ!

ಪ್ರತಿ ವರ್ಷ ಯಕ್ಷಗಾನ ಸಮ್ಮೇಳನ ನಡೆಸಬೇಕೆಂಬುದು ಅಕಾಡೆಮಿ ಉದ್ದೇಶ. ಅದಕ್ಕಾಗಿ ಬಜೆಟ್‌ನಲ್ಲಿ ಹಣ ಕೊಟ್ಟರಷ್ಟೇ ಅಕ್ಟೋಬರ್‌ ಅಥವಾ ನವೆಂಬರ್‌ ಅಂತ್ಯದೊಳಗೆ ಸಮ್ಮೇಳನ ಮಾಡುತ್ತೇವೆ.

-ಡಾ। ತಲ್ಲೂರು ಶಿವರಾಮಶೆಟ್ಟಿ, ಅಧ್ಯಕ್ಷ, ಯಕ್ಷಗಾನ ಅಕಾಡೆಮಿ.