ಸಿದ್ಧರಾಮಯ್ಯ ಅವರದು ಕೇವಲ ಭ್ರಷ್ಟಾಚಾರ, ತುಷ್ಟೀಕರಣ ಹಾಗೂ ಖಜಾನೆ ಖಾಲಿ ಮಾಡಿರುವುದಷ್ಟೇ ಸಾಧನೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿದ್ಧರಾಮಯ್ಯ ಅವರದು ಕೇವಲ ಭ್ರಷ್ಟಾಚಾರ, ತುಷ್ಟೀಕರಣ ಹಾಗೂ ಖಜಾನೆ ಖಾಲಿ ಮಾಡಿರುವುದಷ್ಟೇ ಸಾಧನೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಗೆ ಸಿಎಂ ಆಗಿರುವುದಕ್ಕೆ ನಮಗೇನೂ ಬೇಸರ ಇಲ್ಲ. ಆದರೆ, ಅವರ ಅವಧಿಯಲ್ಲಿ ಅಭಿವೃದ್ಧಿ ಸಾಧನೆ ಶೂನ್ಯ. ರಾಜ್ಯದ ಜನಕ್ಕೆ ಸಂತೋಷ ತಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮನರೇಗಾ ಹೆಸರು ಬದಲಾವಣೆಗೆ ಕಾಂಗ್ರೆಸ್ ವಿರೋಧ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಕಾಂಗ್ರೆಸ್ ವಿಬಿಜಿ ರಾಮ್ ಜಿ ಕಾಯ್ದೆ ಬಗ್ಗೆ ತಪ್ಪು ಸಂದೇಶ ಕೊಡುತ್ತಿದೆ. ಈ ಪಕ್ಷ ಸುಳ್ಳು ಸೃಷ್ಟಿಸುವ ಕೈಗಾರಿಕೆ ಸ್ಥಾಪಿಸಿದೆ. ಸುಳ್ಳು ಸೃಷ್ಟಿಸಿ ಪ್ರಸಾರ ಮಾಡುತ್ತಿದೆ. ಮನರೇಗಾ ಯೋಜನೆಯನ್ನು ಕೂಲಿ ಕೆಲಸದ ಕಲ್ಪನೆಯಲ್ಲಿ ಮಾಡಿದ್ದರು. ಯೋಜನೆಯಲ್ಲಿ ಎರಡು ವಿಚಾರವಿದೆ. ಜನರಿಗೆ ಕೆಲಸ ಕೊಡುವುದರೊಂದಿಗೆ ವಿಕಸಿತ ಗ್ರಾಮ ಮಾಡುವ ಉದ್ದೇಶ ಮತ್ತು ಬಾಳಿಕೆ ಬರುವ ಮೂಲಸೌಕರ್ಯ ಸೃಷ್ಟಿಸುವ ಉದ್ದೇಶವಿದೆ. ಈ ಕಾರಣದಿಂದ ಈ ಯೋಜನೆ ಬದಲಾಗಿದೆ ಎಂದರು.ಹಿಂದೆ ನರೇಗಾದಲ್ಲಿ ದೊಡ್ಡ ಪ್ರಮಾಣದ ಸೋರಿಕೆ ಇತ್ತು. ನಕಲಿ ಜಾಬ್ ಕಾರ್ಡ್ ಸೃಷ್ಟಿಸಲಾಗುತ್ತಿತ್ತು. ಇದೀಗ ಎಲ್ಲದಕ್ಕೂ ಬ್ರೇಕ್ ಬೀಳಲಿದೆ. ವಿಬಿಜಿ ರಾಮ್ ಜಿ ಯೋಜನೆ ನಕಲಿ ಮಾಡಲು ಅಸಾಧ್ಯ. ಇನ್ನು ಭ್ರಷ್ಟಾಚಾರ ದೂರದ ಮಾತು. ಹೀಗಾಗಿ ಕಾಂಗ್ರೆಸ್‌ನವರು ನಮ್ಮ ಯೋಜನೆ ವಿರೋಧಿಸುತ್ತಿದ್ದಾರೆ. ನಮ್ಮ ಸರ್ಕಾರ ಈ ಯೋಜನೆಗೆ 17 ಸಾವಿರ ಕೊಟಿ ರು.ಗೂ ಅಧಿಕ ಅನುದಾನ ನೀಡಲಿದೆ. ಯೋಜನೆಯಡಿ ರಾಜ್ಯಗಳಿಗೆ 17 ಸಾವಿರ ಕೋಟಿ ರು. ಸಿಗಲಿದೆ. ರಾಜೀವ್ ಗಾಂಧಿ ಹೇಳಿದಂತೆ 100 ರು. ಬಿಡುಗಡೆ ಮಾಡಿದರೆ ಜನರಿಗೆ 15 ರು. ಮಾತ್ರ ಸೇರುತ್ತಿತ್ತು. ನಮ್ಮ ಸರ್ಕಾರ ಈ ದುಸ್ಥಿತಿ ಬದಲಾಯಿಸಿದೆ. ಹೀಗಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಹೇಳಿದರು.