ಸಾರಾಂಶ
ಶ್ರಾವಣ ಮಾಸವು ಸಂಭ್ರಮ ಸಡಗರದ ಕಾಲ. ಮನುಷ್ಯನು ಆಧ್ಯಾತ್ಮಿಕವಾಗಿ ಚಿಂತನೆಗೊಂಡು ಮನ ಹಾಗೂ ಮನಸ್ಸನ್ನು ದೇವರ ಧ್ಯಾನದಲ್ಲಿ ಕಳೆಯುವ ಒಳ್ಳೆಯ ಸಮಯವಾಗಿದ್ದು ಜೀವನದ ನೆಮ್ಮದಿಗೆ, ಸಮಸ್ಯೆಗಳಿಗೆ ಆಧ್ಯಾತ್ಮವೊಂದೆ ಪರಿಹಾರ ಒದಗಿಸಬಲ್ಲದು ಎಂದು ನಿವೃತ್ತ ವಿಜ್ಞಾನ ಶಿಕ್ಷಕ ರಾಮಚಂದ್ರ ಮೋನೆ ಹೇಳಿದರು.
ಗದಗ: ಶ್ರಾವಣ ಮಾಸವು ಸಂಭ್ರಮ ಸಡಗರದ ಕಾಲ. ಮನುಷ್ಯನು ಆಧ್ಯಾತ್ಮಿಕವಾಗಿ ಚಿಂತನೆಗೊಂಡು ಮನ ಹಾಗೂ ಮನಸ್ಸನ್ನು ದೇವರ ಧ್ಯಾನದಲ್ಲಿ ಕಳೆಯುವ ಒಳ್ಳೆಯ ಸಮಯವಾಗಿದ್ದು ಜೀವನದ ನೆಮ್ಮದಿಗೆ, ಸಮಸ್ಯೆಗಳಿಗೆ ಆಧ್ಯಾತ್ಮವೊಂದೆ ಪರಿಹಾರ ಒದಗಿಸಬಲ್ಲದು ಎಂದು ನಿವೃತ್ತ ವಿಜ್ಞಾನ ಶಿಕ್ಷಕ ರಾಮಚಂದ್ರ ಮೋನೆ ಹೇಳಿದರು. ಅವರು ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ನಡೆದ 338ನೇ ಮಾಸಿಕ ಶಿವಾನುಭವ ಶ್ರಾವಣ ಸಂಜೆ ಗೋಷ್ಠಿಯಲ್ಲಿ ಆಧ್ಯಾತ್ಮಿಕತೆ ಹಾಗೂ ನಾವು ವಿಷಯವಾಗಿ ಮಾತನಾಡಿದರು. ಆಧ್ಯಾತ್ಮ ಎಂದರೆ ನಮ್ಮನ್ನು ನಾವು ತಿಳಿದುಕೊಳ್ಳುವದು. ಮಾಡುವ ಕಾಯಕದಲ್ಲಿ ನಂಬಿಕೆ ಇಟ್ಟು ಅದನ್ನೆ ದೇವರೆಂದು ತಿಳಿದು ಮೌಲ್ಯಯುತವಾಗಿ ಜೀವನ ನಡೆಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಜಿ.ವ್ಹಿ. ಹಂಪಣ್ಣವರ ಮಾತನಾಡಿ, ಮಠಗಳು ಧಾರ್ಮಿಕ ನೆಲೆಗಟ್ಟನ್ನು ಕಟ್ಟಿಕೊಡುವ ಶ್ರದ್ಧಾ ಕೇಂದ್ರಗಳು. ಗದಗ ಪರಿಸರದಲ್ಲಿ ಅಡವೀಂದ್ರ ಮಠವು ಮಾಸಿಕ ಶಿವಾನುಭವದ ಮೂಲಕ ಭಕ್ತರಲ್ಲಿ ಧರ್ಮ ಜಾಗೃತಿ ಮಾಡುತ್ತಿದೆ ಎಂದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ವಾಣಿಜ್ಯ ರತ್ನ ಪ್ರಶಸ್ತಿ ಪಡೆದುಕೊಂಡ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮ್ಮುಖವನ್ನು ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮುಂತಾದವರು ಮಾತನಾಡಿದರು. ಅಧ್ಯಕ್ಷತೆಯನ್ನು ಶಿವಾನುಭವ ಸಮಿತಿಯ ಅಧ್ಯಕ್ಷ ಡಾ.ಎಸ್.ಕೆ. ನಾಲತ್ವಾಡಮಠ ವಹಿಸಿದ್ದರು. ರತ್ನಮ್ಮ ಮಂಟೂರಮಠ ಮತ್ತು ಸಂಗಡಿಗರು ಪ್ರಾರ್ಥನೆ ಜರುಗಿತು, ಸಿದ್ದೇಶ ಜವಳಿ ಸ್ವಾಗತಿಸಿದರು. ಪ್ರಕಾಶ ಬಂಡಿ ನಿರೂಪಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಬಿ. ತೋಟಗೇರ, ಕಾರ್ಯದರ್ಶಿ ಪ್ರೊ.ಬಿ.ಬಿ. ಪಾಟೀಲ, ಸಾಂಸ್ಕೃತಿಕ ಕಾರ್ಯದರ್ಶಿ ವಿನಾಯಕ ಸಜ್ಜನ, ಕೋಶಾಧ್ಯಕ್ಷ ಯು.ಆರ್. ಭೂಸನೂರಮಠ, ಪಿ.ಸಿ. ಪುರಾಣಿಕಮಠ, ಶರಣಬಸಪ್ಪ ಗುಡಿಮನಿ, ರವೀಂದ್ರ ಮಾಶಾಳ, ಎಸ್.ಎಂ. ಮಾಶಾಳ ವಹಿಸಿದ್ದರು.