ಸಾರಾಂಶ
ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾರಾಟ ಕಂಪನಿ, ಇನ್ಸೂರೆನ್ಸ್ ಕಂಪನಿ ಸೇರಿದಂತೆ ದೂರದಾರನನ್ನು ಸಹ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ದೂರದಾರ ಕಾರು ಮಾಲೀಕನಿಗೆ ₹15 ಸಾವಿರ ಪರಿಹಾರ ಒದಗಿಸುವಂತೆ ಆದೇಶ ಹೊರಡಿಸಿದೆ.
ಬಳ್ಳಾರಿ: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾರಾಟ ಕಂಪನಿ, ಇನ್ಸೂರೆನ್ಸ್ ಕಂಪನಿ ಸೇರಿದಂತೆ ದೂರದಾರನನ್ನು ಸಹ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ದೂರದಾರ ಕಾರು ಮಾಲೀಕನಿಗೆ ₹15 ಸಾವಿರ ಪರಿಹಾರ ಒದಗಿಸುವಂತೆ ಆದೇಶ ಹೊರಡಿಸಿದೆ.
ನಗರದ ಪಿಡಬ್ಲ್ಯುಡಿ ಗುತ್ತಿಗೆದಾರ ಕೆ. ಖಲೀಲ ಉರ್ಫ್ ರೆಹಮನ್ ಎಂಬುವರು ಬಳ್ಳಾರಿಯ ಕೆಪಿಎಫ್ ಪ್ರೈವೇಟ್ ಲಿಮಿಟೆಡ್‌ನಿಂದ ಕಾರು ಖರೀದಿ ಮಾಡಿದ್ದರು. ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯಿಂದ ವಾಹನದ ವಿಮೆ ಪಾಲಿಸಿ ಮಾಡಿಸಿದ್ದರು.2023ರ ಆ. 19ರಂದು ವಾಹನ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಯಿತು. ಅದರ ನಷ್ಟ ಪರಿಹಾರ ₹1,40,000 ಮತ್ತು ಮಾನಸಿಕ ವೇದನೆಗೆ ₹25,000 ಪರಿಹಾರ ಕೊಡಿಸಲು ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಕಾರು ಮಾಲೀಕ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಹಾಗೂ ಮಾರ್ಲಾ ಶಶಿಕಲಾ ಉಭಯ ಪಕ್ಷಕಾರರ ದಾಖಲಾತಿ ಹಾಗೂ ಸಾಕ್ಷಿ ಹೇಳಿಕೆಗಳನ್ನು ಪರಿಶೀಲಿಸಿ ವಾದ-ವಿವಾದಗಳನ್ನು ಆಲಿಸಿದರು.
ಆ ನಂತರ ಪ್ರಕರಣದಲ್ಲಿ ವಾಹನ ವಿತರಕರು ಕಾರು ಖರೀದಿಸಿದ ಮಾಲೀಕರಿಗೆ ಖರೀದಿ ಸಮಯದಲ್ಲಿ ವಾಹನವು ಹಳದಿ ಬೋರ್ಡ್ ಹೊಂದಿರುವ ಕಾರಣ ಪರ್ಮಿಟ್ ಪಡೆಯುವುದು ಅವಶ್ಯವೆಂದು ತಿಳಿಸದೇ ಇರುವುದು ಸೇವಾ ನಿರ್ಲಕ್ಷ್ಯವಾಗಿದೆ. ಇದರೊಂದಿಗೆ ಕಾರು ಖರೀದಿ ಮಾಡಿದ ಮಾಲೀಕ 8 ತಿಂಗಳ ವರೆಗೆ ಹಳದಿ ಬೋರ್ಡ್ ಪರ್ಮಿಟ್ ಪಡೆಯದೇ ವಾಹನ ಬಳಕೆ ಮಾಡಿಕೊಂಡಿದ್ದು ಸಹ ಕಾನೂನನ್ನು ಉಲ್ಲಂಘಿಸಿ ನಿರ್ಲಕ್ಷ್ಯ ತೋರಿದ್ದಾರೆ. ಇನ್ಸೂರೆನ್ಸ್ ಕಂಪನಿ ಸಹ ಅಪಘಾತಗೊಳಗಾದ ವಾಹನಕ್ಕೆ ಹಳದಿ ಬೋರ್ಡ್ ಪರ್ಮಿಟ್ ಇಲ್ಲದೇ ಇರುವ ಬಗ್ಗೆ ದಾಖಲೆ ಪರಿಶೀಲಿಸದೇ ಪಾಲಿಸಿ ವಿತರಿಸಿದ್ದು ಸಹ ಸೇವಾ ನಿರ್ಲಕ್ಷ್ಯ ಆಗಿದೆ. ಹಾಗಾಗಿ ವಾಹನ ಅಪಘಾತದ ನಷ್ಟ ಪರಿಹಾರ ಮೊತ್ತ ₹1,40,000ಗಳಲ್ಲಿ ₹70,000ಗಳನ್ನು ದೂರುದಾರರು ಕಾರು ಮಾರಾಟ ಕಂಪನಿಗೆ ಪಾವತಿಸಬೇಕು. ಉಳಿದ ₹ 70,000ಗಳನ್ನು ವಾಹನ ವಿತರಕರು ಸ್ವತಃ ಭರಿಸಿಕೊಂಡು ವಾಹನ ರಿಪೇರಿ ನಂತರ ವಾಹನ ಮಾಲೀಕರಿಗೆ ನೀಡಬೇಕು. ಇನ್ಸೂರೆನ್ಸ್ ಕಂಪನಿಯು ₹10,000 ಪರಿಹಾರ, ಸೇವಾ ನಿರ್ಲಕ್ಷ್ಯತೆಗಾಗಿ ₹5,000 ಗಳನ್ನು ದೂರಿನ ವೆಚ್ಚವಾಗಿ ಅಪಘಾತಕ್ಕೀಡಾದ ಕಾರು ಮಾಲೀಕನಿಗೆ ಆದೇಶವಾದ 45 ದಿನಗಳೊಳಗೆ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.