ಸಾರಾಂಶ
ಮೂರು ತಲೆಮಾರಿನಿಂದ ಬಗೆಹರಿಯದ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿಯ ಶಾಂತವ್ವ ತಮ್ಮನ್ನವರ ಉರ್ಪ ತಳವಾರ (90) ಎಂಬುವರ ಜಮೀನು ವಾಟ್ನಿ ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥವಾಯಿತು.
ಕಲಘಟಗಿ:
ಹೈಕೋರ್ಟ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯಿಂದ ಪಟ್ಟಣದ ನ್ಯಾಯಾಲಯದಲ್ಲಿ ಜರುಗಿದ ಲೋಕ ಅದಾಲತ್‌ನಲ್ಲಿ 531 ಪ್ರಕರಣ ಇತ್ಯರ್ಥವಾಗಿದೆ.ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ ಎನ್. ಹೋನುಲೆ ಅವರ ನೇತೃತ್ವದಲ್ಲಿ ಸನ್ನಿಹತ ಪ್ರಕರಣ 1, ವಾಟ್ನಿ ಹಾಗೂ ಇತರೆ ದಾವೆ 13 ಸೇರಿ 14 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನವಾಗಿ ₹ 17,07,236 ವಸೂಲಾತಿ ಮಾಡಲಾಯಿತು. ದಿವಾಣಿ ನ್ಯಾಯಾಧೀಶ ಗಣೇಶ ಎನ್ ಸಮ್ಮುಖದಲ್ಲಿ ಸನ್ನಿಹತ ಪ್ರಕರಣ -2, ಚೆಕ್ ಬೌನ್ಸ್ 26, ವಾಟ್ನಿ ದಾವೆ 18, ಅಂತಿಮ ಆದೇಶ ದಾವೆ 1, ದಂಡ ಪ್ರಕರಣ 528, ಜನನ ಮರಣ 2 ಸೇರಿ 577 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿ ₹ 36,15,075 ವಸೂಲಾತಿಯಾಗಿದೆ.
ಕಿರಿಯ ದಿವಾಣಿ ನ್ಯಾಯಾಧೀಶ ಗಣೇಶ ಎನ್. ಅವರ ಸಮ್ಮುಖದಲ್ಲಿ ಮೂರು ತಲೆಮಾರಿನಿಂದ ಬಗೆಹರಿಯದ ತಾಲೂಕಿನ ತಬಕದಹೊನ್ನಳ್ಳಿಯ ಶಾಂತವ್ವ ತಮ್ಮನ್ನವರ ಉರ್ಪ ತಳವಾರ (90) ಎಂಬುವರ ಜಮೀನು ವಾಟ್ನಿ ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥವಾಯಿತು. ವಕೀಲರಾದ ಕಿರಣ್ ಹಿರೇಮಠ, ಎಂ.ಜಿ. ಪಾಟೀಲ ಹಾಗೂ ಎಸ್.ಆರ್. ಹಿರೇಮಠ ಕುಟುಂಬ ಸದಸ್ಯರಿಗೆ ತಿಳಿವಳಿಕೆ ನೀಡಿ ರಾಜೀ ಸಂಧಾನ ಮಾಡಿದ್ದಾರೆ.ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಉಪಾಧ್ಯಕ್ಷ ಕೆ.ಬಿ. ಗುಡಿಹಾಳ, ಪ್ರಧಾನ ಕಾರ್ಯದರ್ಶಿ ಸಿ.ಬಿ. ದಾಸ್ತಿಕೊಪ್ಪ, ಮಹಿಳಾ ಪ್ರತಿನಿಧಿ ಗೀತಾ ಮಟ್ಟಿ, ಖಜಾಂಚಿ ಶೋಭಾ ಬಳಿಗೇರ ಸೇರಿದಂತೆ ಹಿರಿಯ-ಕಿರಿಯ ವಕೀಲರು ಉಪಸ್ಥಿತರಿದ್ದರು.