ಕಾರ್ಲೆಕೊಪ್ಪಲು ಗ್ರಾಮದ ಶಶಿಧರ್ ಹಲ್ಲೆಗೊಳಗಾದ ಯುವಕ. ಶಶಿಧರ್ ಹೇಳುವ ಪ್ರಕಾರ, ಸುಮಾರು ಹತ್ತು ವರ್ಷಗಳ ಹಿಂದೆ ಶಿವಕುಮಾರ್ ಎಂಬವರು ಹಾಸನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬೆನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಲು ಶಶಿಧರ್ ಅವರಿಗೆ ಸುಮಾರು ೫೦ ಲಕ್ಷ ರು. ನೀಡಿದ್ದರು. ಆಸ್ತಿ ಖರೀದಿ ಆಗದಿದ್ದಾಗ ಶಶಿಧರ್ ೨೦ ಲಕ್ಷ ರು. ವಾಪಸ್ ನೀಡಿದ್ದರು. ಉಳಿದ ೩೦ ಲಕ್ಷ ರು. ಹಣಕ್ಕೆ ಸಂಬಂಧಿಸಿದಂತೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿತ್ತು. ಈ ಹಣಕಾಸು ವಿಚಾರವೇ ಇತ್ತೀಚಿನ ಹಲ್ಲೆಗೆ ಕಾರಣವಾಗಿದೆ ಎಂದು ಶಶಿಧರ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಸಹಚರರೊಂದಿಗೆ ಸೇರಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹುಳುವಾರೆ ಗ್ರಾಮದ ಬಳಿ ಬೆಳಕಿಗೆ ಬಂದಿದೆ.ಕಾರ್ಲೆಕೊಪ್ಪಲು ಗ್ರಾಮದ ಶಶಿಧರ್ ಹಲ್ಲೆಗೊಳಗಾದ ಯುವಕ. ಶಶಿಧರ್ ಹೇಳುವ ಪ್ರಕಾರ, ಸುಮಾರು ಹತ್ತು ವರ್ಷಗಳ ಹಿಂದೆ ಶಿವಕುಮಾರ್ ಎಂಬವರು ಹಾಸನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬೆನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಲು ಶಶಿಧರ್ ಅವರಿಗೆ ಸುಮಾರು ೫೦ ಲಕ್ಷ ರು. ನೀಡಿದ್ದರು. ಆಸ್ತಿ ಖರೀದಿ ಆಗದಿದ್ದಾಗ ಶಶಿಧರ್ ೨೦ ಲಕ್ಷ ರು. ವಾಪಸ್ ನೀಡಿದ್ದರು. ಉಳಿದ ೩೦ ಲಕ್ಷ ರು. ಹಣಕ್ಕೆ ಸಂಬಂಧಿಸಿದಂತೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿತ್ತು. ಈ ಹಣಕಾಸು ವಿಚಾರವೇ ಇತ್ತೀಚಿನ ಹಲ್ಲೆಗೆ ಕಾರಣವಾಗಿದೆ ಎಂದು ಶಶಿಧರ್ ಆರೋಪಿಸಿದ್ದಾರೆ. ಮಂಗಳವಾರ ಸಂಜೆ ಮನೆಗೆ ಸಾಮಾನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಹುಳುವಾರೆ ಗ್ರಾಮದ ಬಳಿ ಇನ್ನೊವಾ ಕಾರಿನಲ್ಲಿ ಬಂದ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರು ತನ್ನನ್ನು ತಡೆದು ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದು, ಈ ವೇಳೆ ಅವರ ಜೊತೆ ಬಂದಿದ್ದ ಇಬ್ಬರು ಶಶಿಧರ್ ಅವರನ್ನು ಹಿಡಿದುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಶಶಿಧರ್ ಅವರಿಗೆ ಎರಡು ಕಾಲುಗಳು ಮುರಿದಿದ್ದು, ಸುಮಾರು ೧೫ ಹೊಲಿಗೆ ಹಾಕಲಾಗಿದೆ. ಅಲ್ಲದೆ ಬಲ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಸ್ವತಃ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಶಿವಕುಮಾರ್ ಅವರು ತಮ್ಮ ಅಧಿಕಾರದ ದರ್ಪದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಯತ್ನ ಮಾಡಿದ್ದಾರೆ. ನನಗೂ ನನ್ನ ಕುಟುಂಬಕ್ಕೂ ಜೀವ ಭಯವಿದೆ. ನಮಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಶಿಧರ್ ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಗಳ ಸತ್ಯಾಸತ್ಯತೆ ಪರಿಶೀಲನೆ ನಡೆಸಲಾಗುತ್ತಿದೆ.