ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರೆಯುತ್ತಿದ್ದು ಬೆಳೆಗಾರರು ಕಷ್ಟಪಟ್ಟು ಬೆಳೆದ ಕಾಫಿ , ಅಡಿಕೆ, ಬಾಳೆ ಗಿಡಗಳನ್ನು ತುಳಿದು ಹಾಳು ಮಾಡುತ್ತಿವೆ. ಕಾಫಿ ತೋಟಕ್ಕೆ ನೀರು ಹಾಯಿಸಲು ಜೋಡಿಸಿರುವ ಪೈಪ್, ಪಂಪ್‌ಸೆಟ್ ಇತರೆ ಉಪಕರಣಗಳನ್ನು ತುಳಿದು ಹಾಕುತ್ತಿವೆ. ತೋಟದ ರಕ್ಷಣೆಗಾಗಿ ಅಳವಡಿಸಿರುವ ಬೃಹತ್ ಪ್ರಮಾಣದ ಗೇಟನ್ನು ಕಿತ್ತು ಬಿಸಾಡಿವೆ. ಅರೆಹಳ್ಳಿ ಬಿಕ್ಕೋಡು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಗ ಚೀಕನಹಳ್ಳಿ, ತೊಳಲು ಭಾಗಕ್ಕೆ ಲಗ್ಗೆ ಹಾಕುತ್ತಿವೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ತೊಳಲು ಗ್ರಾಮದ ಮಧುಕರ್ ಎಂಬುವರ ತೋಟಕ್ಕೆ 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡಿ ಕಾಫಿ , ಅಡಿಕೆ ಹಾಗೂ ಯಂತ್ರೋಪಕರಣಗಳನ್ನು ಹಾಳು ಮಾಡಿದ ಘಟನೆ ನಡೆದಿದೆ.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರೆಯುತ್ತಿದ್ದು ಬೆಳೆಗಾರರು ಕಷ್ಟಪಟ್ಟು ಬೆಳೆದ ಕಾಫಿ , ಅಡಿಕೆ, ಬಾಳೆ ಗಿಡಗಳನ್ನು ತುಳಿದು ಹಾಳು ಮಾಡುತ್ತಿವೆ. ಕಾಫಿ ತೋಟಕ್ಕೆ ನೀರು ಹಾಯಿಸಲು ಜೋಡಿಸಿರುವ ಪೈಪ್, ಪಂಪ್‌ಸೆಟ್ ಇತರೆ ಉಪಕರಣಗಳನ್ನು ತುಳಿದು ಹಾಕುತ್ತಿವೆ. ತೋಟದ ರಕ್ಷಣೆಗಾಗಿ ಅಳವಡಿಸಿರುವ ಬೃಹತ್ ಪ್ರಮಾಣದ ಗೇಟನ್ನು ಕಿತ್ತು ಬಿಸಾಡಿವೆ. ಅರೆಹಳ್ಳಿ ಬಿಕ್ಕೋಡು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಗ ಚೀಕನಹಳ್ಳಿ, ತೊಳಲು ಭಾಗಕ್ಕೆ ಲಗ್ಗೆ ಹಾಕುತ್ತಿವೆ.

ತಾಲೂಕು ಅರೇಹಳ್ಳಿ ಹೋಬಳಿ ತೊಳಲು ಗ್ರಾಮದಲ್ಲಿ ಕಾಫಿ ತೋಟಕ್ಕೆ 15ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿ ಬೆಳೆಗಳನ್ನು ಹಾಳುಗೆಡವಿದೆ. ಈ ಬಗ್ಗೆ ತೋಟದ ಮಾಲೀಕ ಮಧುಕರ್ ಮಾತನಾಡಿ ಕಾಡಾನೆಗಳು ತೋಟದೊಳಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿವೆ. ಕಳೆದ ವರ್ಷ 200ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ನೆಡಲಾಗಿತ್ತು. ಆನೆಗಳು ಅದರ ಮೇಲೆ ನಡೆದಾಡಿ ತುಳಿದು ಹಾಕಿದೆ. ಅಲ್ಲದೆ ಕೊಯ್ಲಿಗೆ ಬಂದ ಕಾಫಿ ಬೀಜ, ಅಡಿಕೆ ಬೆಳೆಗಳನ್ನು ಹಾಳು ಮಾಡಿದೆ. ಹೊಸದಾಗಿ ಸ್ಪಾಟ್ ಜೆಟ್‌ಗಳನ್ನು ಅಳವಡಿಸಿದ್ದು ಉಪಯೋಗಿಸುವ ಮೊದಲೇ ಆನೆಗಳ ಕಾಲ್ತುಳಿತಕ್ಕೆ ಪುಡಿಯಾಗಿವೆ. ಕಾಡಾನೆಗಳಿಗೆ ಹೆದರಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಈಗ ಕಾಫಿ ಹಣ್ಣು ಕುಯ್ಯುವ ಕಾಲವಾಗಿದ್ದು ಕಾರ್ಮಿಕರಿಲ್ಲದೆ ಪರದಾಡುವಂತೆ ಆಗಿದೆ. ಆನೆಗಳ ದಾಳಿಯಿಂದ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಅರಣ್ಯ ಇಲಾಖೆ ಈ ಕೂಡಲೇ ಬಂದು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.