೪೦೦ ಕೆವಿ ಉಪಕೇಂದ್ರ ಸ್ಥಾಪನೆಗೆ ಗುರುತಿಸಲಾದ ಸ್ಥಳವು ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಹೋಬಳಿ ಹೆಬ್ಬಣಿ ಗ್ರಾಮದ ಸರ್ವೇ ನಂ. ೧೨೨ರಲ್ಲಿ ಇರುವ ಜಾಗವಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಶೀಘ್ರ ಅನುಷ್ಠಾನ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜಿಲ್ಲೆಯಲ್ಲಿ ಮೊದಲ ಬಾರಿಗೆ ೪೦೦ ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಬುಧವಾರ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

೪೦೦ ಕೆವಿ ಉಪಕೇಂದ್ರ ಸ್ಥಾಪನೆಗೆ ಗುರುತಿಸಲಾದ ಸ್ಥಳವು ತಾಲೂಕಿನ ಬಿ.ಜಿ.ಪುರ ಹೋಬಳಿ ಹೆಬ್ಬಣಿ ಗ್ರಾಮದ ಸರ್ವೇ ನಂ. ೧೨೨ರಲ್ಲಿ ಇರುವ ಜಾಗವಾಗಿದೆ. ಪರಿಶೀಲನೆ ವೇಳೆ ಜಾಗದ ವಿಸ್ತೀರ್ಣ, ಭೂಸ್ವರೂಪ, ೪೦೦ ಕೆವಿ ಉಪಕೇಂದ್ರ ಸ್ಥಾಪನೆಗೆ ಅಗತ್ಯವಿರುವ ತಾಂತ್ರಿಕ ಅನುಕೂಲತೆಗಳು, ಸಂಪರ್ಕ ರಸ್ತೆ ಸೌಲಭ್ಯ, ಭದ್ರತಾ ವ್ಯವಸ್ಥೆಗಳು ಹಾಗೂ ಭವಿಷ್ಯ ವಿಸ್ತರಣೆಯ ಸಾಧ್ಯತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಗ್ರವಾಗಿ ಅವಲೋಕನ ನಡೆಸಲಾಯಿತು.

ಈ ೪೦೦ ಕೆವಿ ಉಪಕೇಂದ್ರ ಸ್ಥಾಪನೆಯಾದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಗ್ರಾಮಗಳಿಗೆ ಉತ್ತಮ ಗುಣಮಟ್ಟದ, ನಿರಂತರ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಸಾಧ್ಯವಾಗಲಿದ್ದು, ಕೃಷಿ ಚಟುವಟಿಕೆಗಳು, ಕೈಗಾರಿಕೆಗಳು, ವಾಣಿಜ್ಯ ಕ್ಷೇತ್ರ ಮತ್ತು ಗೃಹ ಬಳಕೆಗೆ ಅಗತ್ಯವಿರುವ ವಿದ್ಯುತ್ ಸರಬರಾಜು ಇನ್ನಷ್ಟು ಸುಧಾರಣೆಯಾಗಲಿದೆ.

ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಶೀಘ್ರ ಹಾಗೂ ಸಮಯಬದ್ಧವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಿದರು.

ಸ್ಥಳ ಪರಿಶೀಲನೆ ವೇಳೆ ವಿದ್ಯುತ್ ಪ್ರಸರಣಾ ನಿಗಮದ ಕಾರ್ಯಪಾಲಕ ಅಭಿಯಂತರರು (ಯೋಜನೆಗಳ ವಿಭಾಗ), ಮಂಡ್ಯ ಉಪವಿಭಾಗಾಧಿಕಾರಿ, ಮಂಡ್ಯ, ಮಳವಳ್ಳಿ ತಹಸೀಲ್ದಾರ್‌ಗಳು ಹಾಗೂ ಇನ್ನಿತರೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು. ಜ.8ರಂದು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯ

ಮಳವಳ್ಳಿ:

ಟಿಇಟಿಯನ್ನು ರಾಷ್ಟ್ರದ ಸೇವಾನಿರತ ಶಿಕ್ಷಕರಿಗೆ ಕಡ್ಡಾಯಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.8ರಂದು ಪ್ರಾಥಮಿಕ ಶಾಲಾ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸೇವಾನಿರತ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮತ್ತು ಕೇಂದ್ರ ಸಮಾನ ವೇತನವನ್ನು ರಾಜ್ಯದ ಶಿಕ್ಷಕರಿಗೂ ನೀಡುವುದು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಅವಶ್ಯಕತೆ ಇದೆ. ಹೀಗಾಗಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನಿರ್ದೇಶನದಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೂಚನೆಯಂತೆ ತಾಲೂಕಿನ ಎಲ್ಲ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಿದ್ದಾರೆ.

ಈಗಾಗಲೇ 15, 20, 25 ಮತ್ತು 30 ವರ್ಷಗಳಿಗೂ ಹೆಚ್ಚು ವರ್ಷಗಳ ಸೇವೆ ಸಲ್ಲಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಲು ಇಂಥ ನಿರ್ಧಾರ ಕೈಕೊಂಡಿದ್ದು, ಎಲ್ಲ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ನಾಗೇಶ್ ಮನವಿ ಮಾಡಿದ್ದಾರೆ.