ದೇಶಕ್ಕಾಗಿ ದುಡಿದ ಮಾಜಿ ಸೈನಿಕರಿಗೆ ಅವರ ಕೋರಿಕೆಯಂತೆ ವಿಳಂಬ ಮಾಡದೆ ಪ್ರಥಮಾದ್ಯತೆ ಮೇಲೆ ನಿವೇಶನ, ಜಮೀನು ಮಂಜೂರು ಮಾಡಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ದೇಶಕ್ಕಾಗಿ ದುಡಿದ ಮಾಜಿ ಸೈನಿಕರಿಗೆ ಅವರ ಕೋರಿಕೆಯಂತೆ ವಿಳಂಬ ಮಾಡದೆ ಪ್ರಥಮಾದ್ಯತೆ ಮೇಲೆ ನಿವೇಶನ, ಜಮೀನು ಮಂಜೂರು ಮಾಡಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ನೀಡಿದರು.ಮೂರು ದಿನ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಪ್ರವಾಸದಲ್ಲಿರುವ ಅವರು ಸೋಮವಾರ ಮಧ್ಯಾಹ್ನ ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ ವಿವಿಧ ಶಾಖೆಗಳ ಪರಿಶೀಲಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜಮೀನು ಮಂಜೂರಾತಿಗೆ ಮಾಜಿ ಸೈನಿಕರಿಂದ ಸಲ್ಲಿಕೆಯಾದ 55 ಪ್ರಸ್ತಾವನೆಯಲ್ಲಿ ಇದುವರಗೆ 7 ಪ್ರಕರಣಗಳಲ್ಲಿ ಮಾತ್ರ ಮಂಜೂರಾತಿ ದೊರೆತಿದೆ. ಉಳಿದರ ಕಥೆ ಏನು? ಎಂದು ಪ್ರಶ್ನಿಸಿದ ಅವರು, ವಿವಿಧ ಹಂತದಲ್ಲಿರುವ ಎಲ್ಲಾ ಪ್ರಸ್ತಾವನೆಗಳನ್ನು ಕೂಡಲೆ ವಿಲೇವಾರಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ನಿರ್ದೇಶನ ನೀಡಿದರು.ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಈ ರೀತಿಯ ಮಾಜಿ ಸೈನಿಕರ ಭೂ ಮಂಜೂರಾತಿಯ ಅನೇಕ ಪ್ರಕರಣಗಳಲ್ಲಿ ಬಾಕಿ ಇದ್ದು, ಲೋಕಾಯುಕ್ತ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದೆ ಎಂದರು.
ಕೆರೆಗಳ ನಿರ್ವಹಣೆ ಮಾಡುತ್ತಿರುವ ಶಾಖೆಯ ಸಿಬ್ಬಂದಿಯಿಂದ ಜಿಲ್ಲೆಯಾದ್ಯಾಂತ 254 ಕೆರೆಗಳಿದ್ದು, ಸರ್ವೆ ಕಾರ್ಯ ಮುಗಿದಿದೆ. ಅದರಲ್ಲಿ 6 ಕೆರೆ ಅತಿಕ್ರಮಣ ಆಗಿರುವ ಕುರಿತು ವಿಚಾರಣೆಯಲ್ಲಿದೆ ಎಂಬ ಮಾಹಿತಿ ಅರಿತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ, ಹಾಗಾದರೆ ಉಳಿದ ಕೆರೆ ಅತಿಕ್ರಮಣದಿಂದ ಮುಕ್ತವಾಗಿವೆ ಎಂದು ಪ್ರಶ್ನಿಸಿ, ಈ ಕುರಿತು ಸಂಜೆ ನಡೆಯುವ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದರು.ಇದಲ್ಲದೆ ಸಿಂಧುತ್ವ ಶಾಖೆ, ಕಂದಾಯ ಕೋರ್ಟ್ ಕೇಸ್, ಭೂ ಪರಿವರ್ತನೆ ಶಾಖೆಗೂ ಭೇಟಿ ನೀಡಿದ ನ್ಯಾಯಮೂರ್ತಿಗಳು ಕಳೆದ 2025ರ ಕ್ಯಾಲೆಂಡರ್ ವರ್ಷದಲ್ಲಿ ಜನವರಿ ದಿಂದ ಡಿಸೆಂಬರ್ ವರೆಗೆ ಸ್ವೀಕೃತ ಅರ್ಜಿ, ವಿಲೇವಾರಿ, ಬಾಕಿ ವಿವರ ಸಲ್ಲಿಸುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೆಕೆಅರ್‌ಡಿಬಿ ಕಾಮಗಾರಿ ವರ್ಷದ ಮಾಹಿತಿ ಕೊಡಿ:ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ ಕೆಕೆಆರ್‌ಡಿಬಿ ಮಂಡಳಿ ಮೂಲಕ ಪ್ರದೇಶದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಸರ್ಕಾರ ನೀಡುತ್ತಿದೆ. ಆದರೆ ಈ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ, ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ದೂರುಗಳು ಸ್ವೀಕೃತವಾಗಿವೆ. ಹೀಗಾಗಿ ಜನವರಿ-2025 ರಿಂದ ಇದೂವರೆಗೆ ಜನಪ್ರತಿನಿಧಿಗಳಿಂದ ಸ್ವೀಕೃತವಾದ ಪ್ರಸ್ತಾವನೆ, ಮಂಡಳಿಗೆ ಶಿಫಾರಸ್ಸು ಮಾಡಿರುವ, ಅಡಳಿತಾತ್ಮಕ ಮಂಜೂರಾತಿ ಹಾಗೂ ಕಾಮಗಾರಿಯ ಪ್ರಸಕ್ತ ಹಂತದ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ನ್ಯಾ.ಬಿ.ಎಸ್.ಪಾಟೀಲ ಎಡಿಸಿಗೆ ಸೂಚಿಸಿದರು.
ವಾರದಲ್ಲಿ ಸಮಸ್ಯೆ ಬಗೆಹರಿಸಿ:ಚಿತ್ತಾಪುರ ತಾಲೂಕಿನ ವಾಡಿ ಗ್ರಾಮದ ಸರ್ವೇ ನಂ.180/1 ರಲ್ಲಿ 2.18 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದು, ಭೂಮಿ ಕಳೆದುಕೊಂಡ ನಿರಾಶ್ರಿತರ ಹೆಸರು ಮೊಹಮ್ಮದ್ ಖಾಜಾ ಬದಲಾಗಿ ಮೊಹಮ್ಮದ್ ಜಾಫರ್ ಆಗಿದ್ದು, ಇದನ್ನು ಸರಿಪಡಿಸುವಂತೆ ಕಳೆದ 25 ವರ್ಷದಿಂದ ಕಚೇರಿಗೆ ಅಲೆದಾಡುತ್ತಿರುವೆ. ಡಿ.ಸಿ. ಕಚೇರಿಯಿಂದ ಆದೇಶ ಸಹ ಮಾಡಲಾಗಿದೆ ಆದರೆ ಅನುಷ್ಟಾನಕ್ಕೆ ಬಂದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಹೆಸರಿ ಸರಿಪಡಿಸಲು ಇಷ್ಟು ವರ್ಷ ಬೇಕೆ? ಎಂದು ಅಸಮಾಧಾನ ವ್ಯಕ್ತಪಡಿಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ನ್ಯಾ.ಬಿ.ಎಸ್.ಪಾಟೀಲ ಸೂಚಿಸಿದರು.
ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಷ್ ಖರ್ಬಿಕರ್, ಎಸ್.ಪಿ. ಸಿದ್ದರಾಜು, ಲೋಕಾಯುಕ್ತ ಸಂಸ್ಥೆಯ ನ್ಯಾಯಾಧೀಶರಾದ ಶ್ರೀನಾಥ್ ಕೆ., ವಿಜಯಾನಂದ., ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ ಆನಂದಶೀಲ ಕೆ. ಇದ್ದರು.