ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ತಾಂತ್ರಿಕ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನವನ್ನು ವಸತಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಉದ್ಘಾಟಿಸಿದರು.
ಬಳ್ಳಾರಿ: ಜಿಲ್ಲಾಡಳಿತ, ಜಿಪಂ ಮತ್ತು ಕೃಷಿ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026ರ ಅಂಗವಾಗಿ ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಆತ್ಮ ಯೋಜನೆಯಡಿ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ತಾಂತ್ರಿಕ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನವನ್ನು ವಸತಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿಗೆ ಆಗುವ ಸಹಕಾರ ಹಾಗೂ ರಾಜ್ಯ ಸರ್ಕಾರ ಕೃಷಿ ಅಭಿವೃದ್ಧಿಗೆ ನೀಡುತ್ತಿರುವ ಪ್ರೋತ್ಸಾಹ ಕುರಿತು ಮಾತನಾಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿರುವ ರೈತರು ಹಾಗೂ ಯುವ ಕೃಷಿಕರು ಸಿರಿಧಾನ್ಯಗಳ ಬಳಕೆಯಿಂದಾಗುವ ಪ್ರಯೋಜನ ಸೇರಿದಂತೆ ಬೆಳೆ ಬೆಳೆಯುವ ಕ್ರಮ, ಆಧುನಿಕ ಕೃಷಿ ಪದ್ಧತಿಯನ್ನು ಹೇಗೆ ಅಳವಡಿಸಿಕೊಳ್ಳಬೇಕು. ತಾಂತ್ರಿಕತೆಯನ್ನು ಹೇಗೆ ಮೈಗೂಡಿಸಿಕೊಳ್ಳಬೇಕು ಎಂಬುದರ ಕುರಿತು ತಿಳಿಸಿದರು.ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಾಲಿಕೆ ಮೇಯರ್ ಪಿ. ಗಾದೆಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಗಾಳಿ, ನೀರು ಮತ್ತು ಆಹಾರ ಸೇರಿದಂತೆ ಎಲ್ಲವೂ ಕಲುಷಿತಗೊಳ್ಳುತ್ತಿವೆ. ಈ ಮಾಲಿನ್ಯದ ಪರಿಣಾಮವಾಗಿ ಹೃದಯಾಘಾತ, ರಕ್ತದೊತ್ತಡ ಹಾಗೂ ಮಧುಮೇಹದಂತಹ ಕಾಯಿಲೆಗಳು ಹೆಚ್ಚುತ್ತಿವೆ. ನಾವು ಸೇವಿಸುವ ಆಹಾರದಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಮಾತ್ರ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಕೃಷಿ ಇಲಾಖೆಯು ರೈತರು ಮತ್ತು ಸಾರ್ವಜನಿಕರಲ್ಲಿ ಆಹಾರದ ಗುಣಮಟ್ಟದ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆಹಾರ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಯುವ ಪೀಳಿಗೆಯಲ್ಲಿ ಅರಿವು ಮೂಡಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ಸೇವನೆಗೆ ಮುಂದಾಗಬೇಕು. ಹಿಂದೆ ಬಡವರ ಆಹಾರವೆಂದು ಪರಿಗಣಿಸಲಾಗಿದ್ದ ರಾಗಿ, ಸಜ್ಜೆ, ಜೋಳದಂತಹ ಸಿರಿಧಾನ್ಯಗಳಿಗೆ ಈಗ ಹೆಚ್ಚಿನ ಬೇಡಿಕೆ ಬಂದಿದೆ. ಸಿರಿಧಾನ್ಯಗಳ ಬಳಕೆ ಹೆಚ್ಚುವುದರಿಂದ ರೈತರ ಬದುಕು ಹಸನಾಗುವುದಲ್ಲದೆ, ಜನರ ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು ವಿಶೇಷ ಉಪನ್ಯಾಸ ನೀಡಿದರು.ಗಮನ ಸೆಳೆದ ಉತ್ಪನ್ನ, ವಿವಿಧ ಪರಿಕರ ಮಳಿಗೆಗಳು: ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026ರ ಅಂಗವಾಗಿ ಮುನಿಸಿಪಲ್ ಕಾಲೇಜ್ ಮೈದಾನದ ಆವರಣದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳ ಮಳಿಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ವಿವಿಧ ಕೃಷಿ ಪರಿಕರಗಳ ಮಳಿಗೆಗಳು ಸೇರಿದಂತೆ ವಿವಿಧ ಮಳಿಗೆ ಹಾಕಲಾಗಿತ್ತು.
ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ತಾಲೂಕು ಕೃಷಿ ಅಧಿಕಾರಿ ದಯಾನಂದ ಪಾಲ್ಗೊಂಡಿದ್ದರು.