ಅಳ್ನಾವರ:

ಒಂಟಿತನ ಮತ್ತು ಖಿನ್ನತೆ ಯುವಪೀಳಿಗೆಗೆ ಅಂಟಿಕೊಂಡಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಯುವ ಸಮೂಹ ಸಮಾಜದೊಡನೆ ಬೆರೆತು ಬದುಕಬೇಕು ಎಂದು ಖ್ಯಾತ ವೈದ್ಯ ಡಾ. ಸಂಜೀವ ಕುಲಕರ್ಣಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹದಿಹರೆಯದವರ ಸಮಸ್ಯೆ ಮತ್ತು ಪರಿಹಾರೋಪಾಯಗಳು ಕುರಿತು ಅವರು ಮಾತನಾಡಿದರು.

ಸಾಧನೆಯ ಹಾದಿಯಲ್ಲಿ ಸಾಗಬೇಕಾದ ಯುವ ಸಮುದಾಯ ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವುದು ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ದೇಶದ ಮುಂದಿನ ಭವಿಷ್ಯ ರೂಪಿಸಬೇಕಾದ ಯುವ ಜನಾಂಗ ಹದಿಹರೆಯದ ಸಮಯದಲ್ಲಿ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದ್ದು ಇದರ ಬಗ್ಗೆ ಚಿಂತಿಸದೆ ಹೋದರೆ ಸಮಾಜ ಅವ್ಯವಸ್ಥೆಯತ್ತ ಸರಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವಕರು ಪ್ರೀತಿ, ಪ್ರೇಮದ ಕನಸನ್ನು ಕಾಣದೆ ರಾಷ್ಟ್ರ ನಾಯಕರಂತೆ ಕನಸು ಕಟ್ಟಿಕೊಳ್ಳಬೇಕು. ಸಂಘಟಿತ ಸಮಾಜಮುಖಿ ಚಿಂತನೆ ಅಳವಡಿಸಿಕೊಂಡು ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಕನಸು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.


ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಯುವಕರು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬೇಕು. ದೇಶದಲ್ಲಿ ಬದಲಾವಣೆ ಕಾಣಬೇಕಾದರೆ ಅದು ಯುವಶಕ್ತಿಯಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು.

ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯರಾದ ಡಾ. ಉಮಾ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಕವಿವ ಸಂಘದ ಕಾನೂನು ಮಂಟಪದ ಶಿವಾನಂದ ಭಾವಿಕಟ್ಟಿ, ಕಸಾಪ ತಾಲೂಕಾಧ್ಯಕ್ಷ ಗುರುರಾಜ ಸಬನೀಸ, ಡಾ. ಆರ್.ಬಿ. ಸೋನೆಖಾನ್, ಡಾ. ಪರ್ವಿನ್ ಶೇಖ, ಸುರೇಶ ದೊಡಮನಿ, ಅಶ್ವಿನಿ ನಿಪ್ಪಾಣಿ, ಡಾ. ಸುಮಾ ಸಾವಂತ, ತೇಜಸ್ವಿನಿ ಇದ್ದರು.