ಕೊಲ್ಲೂರು: ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸುವುದಕ್ಕೆ ಏದುಸಿರು ಬಿಡುತ್ತಿದೆ, ಅದರ ಪರಿಸ್ಥಿತಿ ನೋಡಿದರೆ ಅಯ್ಯೋ ಅನ್ನಿಸುತ್ತಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಕೊಲ್ಲೂರು ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ, 5 ಗ್ಯಾರಂಟಿಗಳನ್ನು ನೀಡಿದ್ದೇವೆ ಎನ್ನುತ್ತಾರೆ, ಆದರೆ ಈ ಗ್ಯಾರಂಟಿಗಳಿಂದ ಉಂಟಾದ ಆರ್ಥಿಕ ಹೊರೆ ಯಾರ ಮೇಲೆ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದ ಜನರು ತಮ್ಮ ದುಡಿಮೆಯಿಂದ ರಾಜ್ಯದ ಖಜಾನೆ ತುಂಬಿಸುತ್ತಿದ್ದಾರೆ. ಹಾಗಾಗಿ ಈ ಗ್ಯಾರಂಟಿ ನೀಡಲಿಕ್ಕೆ ಸರ್ಕಾರಕ್ಕೆ ಜನರ ಕೊಡುಗೆ ದೊಡ್ಡದು, ಹೊರತು ರಾಜ್ಯದ ಜನತೆಗೆ ಸಿಎಂ - ಡಿಸಿಎಂ ಕೊಡುಗೆ ಏನಿಲ್ಲ, ಅವರೇನೂ ತಮ್ಮ ಸ್ವಂತ ಹಣದಿಂದ ಗ್ಯಾರಂಟಿ ನೀಡುತ್ತಿಲ್ಲ ಎಂದರು.

ಕರಾವಳಿಯಲ್ಲಿ ಕ್ಯಾಬಿನೆಟ್ ಸಭೆ ಮಾಡಿ 32 ಸಾವಿರ ಕೋಟಿ ರು. ಅನುದಾನ ಕೊಡುತ್ತೇನೆ ಎಂದು ಘೋಷಿಸಿದರು, 2 - 3 ತಿಂಗಳುಗಳು ಕಳೆಯಿತು, ಈ ಹಣ ಎಲ್ಲಿಂದ ತರ್ತೀರಿ ? ಕರಾವಳಿಯ ಜನತೆಗೆ ಘೋಷಣೆಯ ಮೂಲಕ ತೃಪ್ತಿ ಪಡಿಸಲು ಯೋಚಿಸಿದ್ದಲ್ಲಿ ಮುಂದೆ ಪ್ರಾಯಶ್ಚಿತ್ತಕ್ಕೆ ಕಾಂಗ್ರೆಸ್ ಸಿದ್ಧವಾಗಿರಬೇಕು ಎಂದವರು ಎಚ್ಚರಿಸಿದರು.ಕರಾವಳಿಗೆ ಸಿಎಂ ಕೋಟಿಕೋಟಿ ಹಣ ಘೋಷಿಸಿದ್ದು ಇಲ್ಲಿನ ಜನರ ಉದ್ಧಾರಕ್ಕೆ ಅಲ್ಲ, ಬೆಂಗಳೂರಿನ ಸುತ್ತಮುತ್ತದಂತೆ ಇಲ್ಲಿಯೂ ತಮ್ಮ ಭೂಮಿಯ ವ್ಯವಹಾರವನ್ನು ವಿಸ್ತರಿಸುವ ಪ್ರಯತ್ನ ಇದೆ, ಈ ಬಗ್ಗೆ ನನ್ನಲ್ಲಿ ಮಾಹಿತಿ ಇದೆ ಎಂದರು.ಮಹಿಳೆಯರಿಗೆ ಉಚಿತವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಕ್ಕೆ ಗ್ಯಾರಂಟಿ ನೀಡಿದ್ದೀರಿ, ಆದರೆ 2023ರಲ್ಲಿ 15 % ಬಸ್ ದರ ಏರಿಕೆ ಮಾಡಿದ್ದೀರಿ, ಈಗ ಮತ್ತೆ ಏರಿಕೆ ಮಾಡಿ ಒಟ್ಟು 45 % ಏರಿಕೆ ಮಾಡಿದ್ದೀರಿ, ಮತ್ತು ಉಚಿತ ಗ್ಯಾರಂಟಿ ನೀಡಿದ್ದೇವೆ ಎನ್ನುತ್ತಿದ್ದೀರಿ, ಇದರ ಅರ್ಥವೇನು ಎಂದವರು ಪ್ರಶ್ನಿಸಿದರು.

ಗ್ಯಾರಂಟಿಗಾಗಿ ಅಬಕಾರಿ ಇಲಾಖೆಯಿಂದ 40 ಸಾವಿರ ಕೋಟಿ ರು. ತೆಗೆದಿದ್ದೀರಿ, ಬೇರೆ ಬೇರೆ ಇಲಾಖೆಗಳಿಂದ ಹಣ ತೆಗೆದು ಗ್ಯಾರಂಟಿ ನೀಡುತ್ತಿದ್ದೀರಿ, ತೆರಿಗೆ ಹೆಚ್ಚಿಸಿದ್ದೀರಿ, ನಾನು ಗ್ಯಾರಂಟಿ ವಿರೋಧಿಯಲ್ಲ, ಆದರೆ ಆಡಳಿತ ಕೇವಲ ಗ್ಯಾರಂಟಿಗಳಿಗೆ ಸೀಮಿತವಾದರೇ ರಾಜ್ಯದ ಭವಿಷ್ಯ, ಜನರ ಬದುಕು ಏನಾಗಬಹುದು ಎಂದವರು ಪ್ರಶ್ನಿಸಿದರು.

ಕುಮಾರಸ್ವಾಮಿಗೆ ಹೊಟ್ಟೆ ಉರಿ, ಸುಳ್ಳೆ ಅವರ ಮನೆ ದೇವ್ರು ಎಂದು ಸಿಎಂ ಹೇಳುತ್ತಾರೆ. ನೀವೇನು ಮಾಡ್ತಿದ್ದೀರಿ, ಕಬ್ಬು ಬೆಳೆಗಾರರಿಗೆ ಹೋರಾಟದ ಬಳಿಕವೂ ಯಾವುದೇ ಪ್ರಯೋಜನವಾಗಿಲ್ಲ, ಇದುವರೆಗೂ ಕಬ್ಬು ಬೆಳೆಗಾರರಿಗೆ ನೆರವು ನೀಡಿಲ್ಲ, ಬರ ಪರಿಹಾರ ನೀಡಿಲ್ಲ, ಬರ ಪರಿಹಾರಕ್ಕಾಗಿ ನಿಮ್ಮ ಪಕ್ಷದ ಶಾಸಕರೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ರು, ಸಕ್ಕರೆ ಕಾರ್ಖಾನೆಯ ಮಾಲಕರು ನಷ್ಟ ಅಂತಾರೇ, ಹೆಲಿಕ್ಯಾಪ್ಟರ್ ನಲ್ಲಿ ತಿರುಗುತ್ತಿದ್ದಾರೆ, ಅವರಿಗೆ ನಷ್ಟ ಆಗುತ್ತಿದ್ದಾರೆ ಇದು ಸಾಧ್ಯಾವಾ ? ಎಂದವರು ಖಾರವಾಗಿ ಪ್ರಶ್ನಿಸಿದರು.


ಕಾಂಗ್ರೆಸ್ ಪಕ್ಷಕ್ಕೆ ತನ್ನ ಭಾರತ ಜೋಡೋ ವಿಚಾರದಲ್ಲಿ ಇರುವ ಕಾಳಜಿ ರೈತರ ಮೇಲಿಲ್ಲಾ ಎಂದವರು ಗಂಭೀರ ಆರೋಪ ಮಾಡಿದರು.