ಎನ್.ಡಿ.ಎ. ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ಎಸ್‌ಐಆರ್ ನೆಪದಲ್ಲಿ ಅರ್ಹ ಮತದಾರರನ್ನು ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡುತ್ತಿದೆ ಎಂದು ಎಐಸಿಸಿ ಉಸ್ತುವಾರಿ ಹಾಗೂ ಸಿಡಬ್ಲ್ಯೂಸಿ ಸದಸ್ಯ ಕಮಲೇಶ ಪಟೇಲ್ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದರು.

ರಟ್ಟೀಹಳ್ಳಿ:ಎನ್.ಡಿ.ಎ. ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ಎಸ್‌ಐಆರ್ ನೆಪದಲ್ಲಿ ಅರ್ಹ ಮತದಾರರನ್ನು ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡುತ್ತಿದೆ ಎಂದು ಎಐಸಿಸಿ ಉಸ್ತುವಾರಿ ಹಾಗೂ ಸಿಡಬ್ಲ್ಯೂಸಿ ಸದಸ್ಯ ಕಮಲೇಶ ಪಟೇಲ್ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ರಟ್ಟೀಹಳ್ಳಿ ಹಾಗೂ ಹಿರೇಕೆರೂರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ವೋಟ್ ಬಚಾವೋ ದೇಶ ಬಚಾವೋ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಎಸ್‌ಐಆರ್ ನೆಪದಲ್ಲಿ ರಾಜ್ಯದಲ್ಲಿ ಸುಮಾರು ೧ ಕೋಟಿ ಮತಗಳನ್ನು ಡಿಲೀಟ್ ಮಾಡಿದ್ದು, ಮಹದೇವಪುರ ವಿಧಾನಸಭಾ ಕ್ಷೇತ್ರ ಒಂದರಲ್ಲೇ ಒಂದು ಲಕ್ಷ ಮತಗಳನ್ನು ಡಿಲೀಟ್ ಮಾಡಿದ್ದು ಎಲ್ಲ ಅಕ್ರಮದ ಹೊಣೆಹೊತ್ತು ತಕ್ಷಣ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶಕುಮಾರ ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ತಕ್ಕ ಉತ್ತರ ನೀಡುವ ಮೂಲಕ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನ ಮಂತ್ರಿ ಗದ್ದುಗೆಗೆ ಏರಿಸೋಣ ಎಂದರು.

ಶಾಸಕ ಯು.ಬಿ ಬಣಕಾರ ಮಾತನಾಡಿ, ನರೇಂದ್ರ ಮೋದಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಎಸ್‌ಐಆರ್ ಪ್ರಕ್ರಿಯೆಯನ್ನು ಜಾರಿ ತಂದು ಅನೇಕ ರಾಜ್ಯಗಳಲ್ಲಿ ಕೋಟ್ಯಾಂತರ ಮತಗಳನ್ನು ಡಿಲೀಟ್ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣ ಭಗತ್‌ಸಿಂಗ್ ವೃತ್ತದಿಂದ ಮಹಾಲಕ್ಷ್ಮಿ ಸರ್ಕಲ್, ಹಳೇ ಬಸ್ಟ್ಯಾಂಡ್ ಮೂಲಕ ವೀರಭದ್ರೇಶ್ವರ ದೇವಸ್ಥಾನದ ಆವರಣದವರೆಗೆ ವೋಟ್ ಬಚಾವೋ ದೇಶ ಬಚಾವೋ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಕಾಂಗ್ರಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ರಟ್ಟೀಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ದ್ಯಾವಕ್ಕಳವರ, ರಮೇಶ ಮಡಿವಾಳರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟೇಶ್, ಕೆಪಿಸಿಸಿ ಉಸ್ತುವಾರಿ ಸುರೇಶ ಸವಣೂರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಸಂತಾ, ಪಟ್ಟಣ ಪಂಚಾಯತ್ ಸದಸ್ಯ ಪಿ.ಡಿ. ಬಸನಗೌಡ್ರ, ಸರ್ಫರಾಜ ಮಾಸೂರ, ವಿಜಯ ಅಂಗಡಿ, ನಾಗನಗೌಡ ಕೋಣ್ತಿ, ಮಂಜು ಮಾಸೂರ, ಸಣ್ಣತಮ್ಮಣ್ಣ ಬಾರ್ಕಿ, ಎಸ್.ವಿ. ಪಾಟೀಲ್, ನಾರಾಯಣಪ್ಪ ಗೌರಕ್ಕನವರ, ಪ್ರಕಾಶಗೌಡ ಪಾಟೀಲ, ಚಂದ್ರಪ್ಪ ಬೇಡರ, ಲೀಲಾವತಿ ಗೋಣಿಗೇರಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಇದ್ದರು.