ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದೂತ ಭಗವಾನ್ ಬುದ್ಧ-ಎಡಿಸಿ ಅನ್ನಪೂರ್ಣಾ

| Published : May 13 2025, 01:22 AM IST

ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದೂತ ಭಗವಾನ್ ಬುದ್ಧ-ಎಡಿಸಿ ಅನ್ನಪೂರ್ಣಾ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದೂತ ಭಗವಾನ್ ಬುದ್ಧ. ಬುದ್ಧರ ವಿಚಾರ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಮಂತ್ರದ ಬೀಜ ಬಿತ್ತಬೇಕು ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ. ಹೇಳಿದರು.

ಗದಗ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದೂತ ಭಗವಾನ್ ಬುದ್ಧ. ಬುದ್ಧರ ವಿಚಾರ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಮಂತ್ರದ ಬೀಜ ಬಿತ್ತಬೇಕು ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ. ಹೇಳಿದರು.

ಅವರು ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಭಗವಾನ್ ಬುದ್ಧರ ಜಯಂತಿ ಸಮಾರಂಭದಲ್ಲಿ ಭಗವಾನ್ ಬುದ್ಧರ ಮೂರ್ತಿಗೆ ಪುಷ್ಪ ಸಮರ್ಪಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನ ದುಃಖಮಯವಾಗಿದೆ. ಆಸೆಯೇ ದುಃಖಕ್ಕೆ ಮೂಲ ಕಾರಣವಾಗಿದೆ. ಜೀವನದಲ್ಲಿ ದುಃಖ ನಿವಾರಣೆಗಾಗಿ ಅಷ್ಟಾಂಗ ಮಾರ್ಗಗಳನ್ನು ಭಗವಾನ್ ಬುದ್ಧ ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಆಧ್ಯಾತ್ಮಿಕ ಜೀವನ ನಡೆಸಲು ಹಾಗೂ ಶಾಂತಿಯುತ ಜೀವನ ನಿರ್ವಹಣೆಗಾಗಿ ಹಿಂಸೆ ಮಾಡದಂತೆ ಭಗವಾನ್ ಬುದ್ಧ ಉಪದೇಶಿಸಿದ್ದಾರೆ. ಭಗವಾನ್ ಬುದ್ಧರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯಿದೆ ಎಂದು ಹೇಳಿದರು.

ಸರ್ಕಾರದಿಂದ ಪ್ರಥಮ ಬಾರಿಗೆ ಭಗವಾನ ಬುದ್ಧರ ಜಯಂತಿ ಆಚರಿಸುವ ಮೂಲಕ ಬುದ್ಧರ ಆಚಾರ-ವಿಚಾರ ಸಂದೇಶಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಇದು ನಿತ್ಯ ನಿರಂತರ ಸಾಗಲಿದೆ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ವಿಶೇಷ ಉಪನ್ಯಾಸ ನೀಡಿ, ವಿಶ್ವಕ್ಕೆ ಭಗವಾನ್ ಬುದ್ಧರು ಶಾಂತಿ ಮಂತ್ರ ಸಾರಿದ್ದಾರೆ. ಸಮಾಜದಲ್ಲಿನ ರೋಷ, ದ್ವೇಷ, ಅಸೂಯೆ ಸಮಾಜಘಾತುಕ ವಿಚಾರಗಳಿಂದ ಹೊರಬಂದು ಶಾಂತಿಯ ಬದುಕು ನಡೆಸಬೇಕು, ಸುಳ್ಳು ಹೇಳಬಾರದು. ಕಳ್ಳತನ, ಅವಮಾನ ಮಾಡಬಾರದು. ಮತ್ತೊಬ್ಬರ ಆಸ್ತಿ ಅಪಹರಿಸುವುದು, ಮತ್ತೊಬ್ಬರ ಮನಸ್ಸಿಗೆ ನೋವು ಉಂಟು ಮಾಡುವುದನ್ನು ತ್ಯಜಿಸಬೇಕಲ್ಲದೇ ಮತ್ತೇರಿಸುವ ವಸ್ತುಗಳನ್ನು ತ್ಯಜಿಸಿ, ಗೌರವದಿಂದ ಮೌಲ್ಯಯುತ ಜೀವನ ಸಾಗಿಸಬೇಕು ಎಂದು ಹೇಳಿದ್ದಾರೆ.

ಮನುಷ್ಯನು ಸಂಸ್ಕೃತಿ ಹೀನನಾಗಬಾರದು. ಪ್ರಜ್ಞಾವಂತನಾಗಿ ಬದುಕಬೇಕು. ಸಮಾಜಕ್ಕೆ ಮಾರಕವಾಗುವಂತಹ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಬಾರದು. ತಮ್ಮ ತಮ್ಮ ಜವಾಬ್ದಾರಿ ಅರಿತು ಜೀವನ ನಿರ್ವಹಣೆ ಮಾಡಬೇಕು ಎಂದು ಭಗವಾನ್ ಬುದ್ಧರು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಅಂತಹ ಸಂದೇಶಗಳನ್ನು ಪ್ರತಿಯೊಬ್ಬರೂ ಅನುಸರಿಬೇಕು ಎಂದು ತಿಳಿಸಿ, ಬುದ್ಧರ ಪಂಚಶೀಲ ಮಂತ್ರ ಪಠಣೆಯ ಅರ್ಥವನ್ನು ತಿಳಿಸಿದರು.

ಭಗವಾನ್ ಬುದ್ಧರ ವಂದನೆ ಪಠಣ ಮಾಡಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ತಹಸೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಪಂಡಿತ ವೆಂಕಟೇಶ ಅಲ್ಕೋಡ್ ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ವಂದಿಸಿದರು.