ಸ್ಫೋಟಗೊಂಡ ಬಾಂಬ್‌ ಮೊಳಗಿದ ಸೈರನ್ !

| Published : May 13 2025, 01:21 AM IST

ಸಾರಾಂಶ

ಯುದ್ಧದಂತಹ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಭವನ ಆವರಣದಲ್ಲಿ ಸೋಮವಾರ ನಾಗರಿಕ ಸುರಕ್ಷತಾ ಅಣಕು ಕಾರ್ಯಾಚರಣೆ ವೇಳೆ ಕಂಡು ದೃಶ್ಯಗಳು. ಉಗ್ರ ದಾಳಿಯ ಈ ಅಣಕು ಪ್ರಾತ್ಯಕ್ಷಿಕೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾಡಳಿತ ಭವನದಲ್ಲಿ ಬೆಳಗ್ಗೆ ಸ್ಫೋಟ, ಬುಲೆಟ್‌ಗಳ ಸದ್ದು ಕೇಳಿದ ತಕ್ಷಣ ಆಡಳಿತ ಭವನದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿ ಗಾಬರಿಗೊಂಡು ಅತ್ತಿಂದಿತ್ತ ಓಡಲು ಆರಂಭಿಸಿದರು. ಗುಂಡು ಹಾರಿಸುತ್ತ ಉಗ್ರರು ಜಿಲ್ಲಾಡಳಿತ ಪ್ರವೇಶ ಮಾಡಿದರು. ಬಾಂಬ್‌ ಸ್ಫೋಟಗೊಂಡು ಹಲವರು ಉಸಿರು ಚೆಲ್ಲಿದರೆ, ಕೆಲವರು ಗಾಯಗೊಂಡು ನರಳಾಡುತ್ತಿದ್ದರು. ಉಗ್ರರು ಆಡಳಿತ ಭವನ ಪ್ರವೇಶ ಮಾಡಿರುವ ಸಂದೇಶ ಪೊಲೀಸ್ ಕಂಟ್ರೋಲ್ ರೂಮ್‌ಗೆ ರವಾನೆಯಾಗುತ್ತಿದ್ದಂತೆಯೇ ಕ್ಷಿಪ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು.ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಂಚಾರಿ ಪೊಲೀಸ್, ಎನ್.ಸಿ.ಸಿ ಕಮಾಂಡ್‌ ತಂಡ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‌ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಗಾಯಾಳುಗಳನ್ನು ರಕ್ಷಣೆ ಮಾಡಿದರು.ಜಿಲ್ಲಾಡಳಿತ ಭವನ ಸುತ್ತುವರಿದಿದ್ದ ಸೇನೆ ಭವನದಲ್ಲಿ ಅಡಗಿಕೊಂಡಿರುವ ಉಗ್ರರನ್ನು ಸದೆಬಡೆದು ಜನರನ್ನು ರಕ್ಷಿಸಿದರು.

ಇದು ಯಾವುದೇ ಉಗ್ರ ದಾಳಿಯ ವಿವರಣೆಯಲ್ಲ, ಬದಲಾಗಿ ಯುದ್ಧದಂತಹ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಭವನ ಆವರಣದಲ್ಲಿ ಸೋಮವಾರ ನಾಗರಿಕ ಸುರಕ್ಷತಾ ಅಣಕು ಕಾರ್ಯಾಚರಣೆ ವೇಳೆ ಕಂಡು ದೃಶ್ಯಗಳು. ಉಗ್ರ ದಾಳಿಯ ಈ ಅಣಕು ಪ್ರಾತ್ಯಕ್ಷಿಕೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಸೈರನ್‌ಗಳು ಮೊಳಗಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಸೈರನ್ ಮೊಳಗಿದಾಗ ನಾಗರಿಕರು ಹೇಗೆ ಪ್ರತಿಕ್ರಿಯಿಸಬೇಕು. ಬಾಂಬ್ ಸ್ಫೋಟವಾದರೆ ಏನು ಮಾಡಬೇಕು. ಅವಶೇಷಗಳಡಿ ಸಿಲುಕಿರುವವರನ್ನು ಹೇಗೆ ರಕ್ಷಿಸಬೇಕು. ವೈದ್ಯಕೀಯ ತುರ್ತು ಸೇವೆ ಒದಗಿಸುವುದು ಹೇಗೆ ಎಂಬುದನ್ನು ಅಣಕು ಪ್ರದರ್ಶನದ ಮೂಲಕ ತಿಳಿಸಿಕೊಡಲಾಯಿತು. ಜಿಲ್ಲಾಡಳಿತ ಭವನದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೇ ಅಣಕು ಪ್ರದರ್ಶನ ನಡೆದು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಹೋಗುವ ದೃಶ್ಯವನ್ನು ಜನರು ಕುತೂಹಲದಿಂದ ವೀಕ್ಷಿಸಿದರು.ಅಣಕು ಪ್ರದರ್ಶನದಲ್ಲಿ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರೀಯ ದಳ, ಸ್ವಾನ ತಂಡ, ಸಂಚಾರಿ ಪೊಲೀಸ್, ಎನ್.ಸಿ.ಸಿ ಕಮಾಂಡರ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 300ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್‌ ಮೊಹಸಿನ್, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಒ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.