ಕನ್ನಡಪ್ರಭ ವಾರ್ತೆ ತಾಳಿಕೋಟೆ

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದರೊಂದಿಗೆ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ ಶಾಸಕ ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ನೀಡದೇ ಕಾಂಗ್ರೆಸ್ ಹೈಕಮಾಂಡ್‌ ವಂಚಿಸಿದೆ. ಪಕ್ಷಕ್ಕಾಗಿ ದುಡಿದವರಿಗೆ ಬೆಲೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಸ್. ಪಾಟೀಲ ಯಾಳಗಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಳಿಕೋಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ನಾಡಗೌಡರು ಒಬ್ಬ ಸರಳ ಸಜ್ಜನ ರಾಜಕಾರಣಿ, ಅವರಿಗೆ ಸತತ ಮೂರು ಅವಧಿಗಳಿಂದ ಸಚಿವ ಸ್ಥಾನದ ಭರವಸೆ ಕೊಟ್ಟು ವಂಚಿಸಲಾಗುತ್ತಿದೆ. ಇದು ನಿಜಕ್ಕೂ ನೋವಿನ ಸಂಗತಿ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಹೊಡೆತ ಬೀಳುತ್ತದೆ. ಕಾಂಗ್ರೆಸ್ ಪಕ್ಷದ ಕೇಂದ್ರದ ವರಿಷ್ಠರ ಈ ತೀರ್ಮಾನ ನಿಜಕ್ಕೂ ದುರದೃಷ್ಟಕರ, ನಮ್ಮ ಸಹನೆಗೂ ಒಂದು ಮಿತಿ ಇದೆ. ಅದನ್ನು ಪದೇ ಪದೆ ಪರೀಕ್ಷಿಸುವುದು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಈ ಹಿಂದೆ ರಾಮಕೃಷ್ಣ ಹೆಗಡೆ ಅವರ ವಿರುದ್ಧ ಸ್ಪರ್ಧಿಸಿದ್ದ ಸಿದ್ದು ನ್ಯಾಮಗೌಡರನ್ನು ಗೆಲ್ಲಿಸಿದ ಕೀರ್ತಿ ಶಾಸಕ ಅಪ್ಪಾಜಿ ನಾಡಗೌಡರಿಗೆ ಸಲ್ಲುತ್ತದೆ. ಅವರ ಶಕ್ತಿಯ ಬಗ್ಗೆ ಅರಿತುಕೊಳ್ಳುವ ಕಾರ್ಯ ಹೈ ಹೈಕಮಾಂಡ್ ಮುಂದಾಗಬೇಕೆಂದರು.

ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ, ಭಾರಿ ನಷ್ಟದಲ್ಲಿದ್ದ ಕೆಎಸ್ ಡಿಎಲ್ ನಿಗಮವನ್ನು ವರ್ಷ ₹೫೦೦ ಕೋಟಿಗೂ ಅಧಿಕ ಲಾಭದಾಯಕ ರೀತಿಯಲ್ಲಿ ನಡೆಸಿದ ನಾಯಕರು ಶಾಸಕ ನಾಡಗೌಡರು, ರಾಜ್ಯಮಟ್ಟದಲ್ಲಿ ಸ್ವಪಕ್ಷದಿಂದ ಮಾತ್ರವಲ್ಲ, ಅನ್ಯ ಪಕ್ಷಗಳ ನಾಯಕರಿಂದಲೂ ಗೌರವಿಸಲ್ಪಡುವ ವ್ಯಕ್ತಿ. ಈ ಬಾರಿಯ ಸಂಪುಟದಲ್ಲಿ ಕೆಲವು ಅನುಭವ ಇಲ್ಲದ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಹಿರಿಯ ಶಾಸಕರ ಹಿರಿತನ ಪರಿಗಣಿಸಿಲ್ಲ. ಸಂಪುಟದಲ್ಲಿ ಬದಲಾವಣೆಗೆ ಮುಂದಾದಲ್ಲಿ ನಾಡಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದರು. ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ ಶಕೀಲ ಅಹಮದ್ ಖಾಜಿ ಮಾತನಾಡಿದರು.

ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಮುಖಂಡರಾದ ಎಂ.ಜಿ. ಪಾಟೀಲ, ಸಿದ್ದನಗೌಡ ಪಾಟೀಲ(ನಾವದಗಿ), ಬಿ.ಎನ್. ಹಿಪ್ಪರಗಿ, ಸಂಗನಗೌಡ ಅಸ್ಕಿ, ಬಸನಗೌಡ ಜೈನಾಪೂರ, ಮಲ್ಲನಗೌಡ ಯಾದಗಿರಿ, ಬಸನಗೌಡ ನಾಡಗೌಡ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಭಾವಿ, ಮಲ್ಲು ಮದರಕಲ್ಲ, ನೀಲಮ್ಮ ಪಾಟೀಲ, ಮೋದಿನಸಾ ನಗಾರ್ಚಿ, ಮುನ್ನಾ ಅರ್ಜುಣಗಿ, ಫಯಾಜ ಉತ್ನಾಳ, ರಫೀಕ ಬೇಪಾರಿ, ಕಾಸೀಮ ಅಬಾಲೆ, ಆಸಿಫ್ ಕೆಂಭಾವಿ, ಗೋಪಾಲ ಕಟ್ಟಿಮನಿ, ಮೊಯೀನ ಮನಗೂಳಿ, ಬಬ್ಲು ಕೆಂಭಾವಿ ಮತ್ತಿತರರು ಇದ್ದರು.