ಕನ್ನಡಪ್ರಭ ವಾರ್ತೆ ವಿಜಯಪುರ
ರೈತರ ಹಿತದೃಷ್ಟಿಯಿಂದ ಪಾರದರ್ಶಕ ವಹಿವಾಟಿಗಾಗಿ ಆರಂಭಿಸಲಾದ ಆನ್ ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ಕಲ್ಪಿಸಲು ಈಚೆಗೆ ಸಭೆ ನಡೆಸಿ, ಸೂಚನೆ ನೀಡಿದ ನಂತರ ನಡೆದ ಒಣದ್ರಾಕ್ಷಿ ವಹಿವಾಟಿನಲ್ಲಿ ಈವರೆಗೆ ನಡೆಯುತ್ತಿದ್ದ ಸರಾಸರಿ ₹5 ಕೋಟಿಯಿಂದ ₹12 ಕೋಟಿಗೆ ಏರಿಕೆ ಆಗಿರುವುದು ಒಳ್ಳೆಯ ಬೆಳವಣಿಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.ನಗರದಲ್ಲಿ ಒಣದ್ರಾಕ್ಷಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ಆರಂಭಗೊಂಡರೂ, ಕೆಲ ವ್ಯಕ್ತಿಗಳು ಖಾಸಗಿ ಅಸೋಷಿಯನ್ ರಚಿಸಿ ಎಪಿಎಂಸಿಗೆ ಸಂಬಂಧವೇ ಇಲ್ಲದಂತೆ ತಮ್ಮದೆಯಾದ ನಿಯಮಾವಳಿ ಮಾಡಿಕೊಂಡು, ಕೆಲವೇ ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಿ ಕಡಿಮೆ ದರದಲ್ಲಿ ಖರೀದಿ ಮಾಡಿ ರೈತರಿಗೆ ವಂಚನೆ ಮಾಡಲಾಗುತ್ತಿತ್ತು. ಅಲ್ಲದೇ, ತಮ್ಮ ಕೋಲ್ಡ್ ಸ್ಟೋರೇಜ್ ಗಳಲ್ಲಿ ರೈತರು ತಂದಿಡುವ ಉತ್ಪನ್ನಗಳಿಗೆ ಬಾಡಿಗೆ ಪಡೆದುಕೊಳ್ಳುವುದಲ್ಲದೆ, ಮಾರಾಟದ ಬಳಿಕ ಶೇ.2ರಷ್ಟು ಕಮಿಷನ್ ಸಹ ವಸೂಲಿ ಮಾಡುತ್ತಿದ್ದರು. ಇದರಿಂದ ರೈತರಿಗೆ ಸೂಕ್ತ ಬೆಲೆ ಮತ್ತು ವಿನಾಕಾರಣ ಕಮಿಷನ್ ನೀಡುತ್ತಿದ್ದರಿಂದ ನಷ್ಟ ಉಂಟಾಗುತ್ತಿತ್ತು. ತೂಕದಲ್ಲಿಯೂ ವ್ಯತ್ಯಾಸವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಈಚೆಗೆ (ಜುಲೈ 28) ಎಪಿಎಂಸಿ ಪ್ರಾಂಗಣದಲ್ಲಿ ದ್ರಾಕ್ಷಿ ಬೆಳೆಗಾರರು ಹಾಗೂ ಎಪಿಎಂಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಾರದಲ್ಲಿ ಎರಡು ಭಾರಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲೇ ಒಣದ್ರಾಕ್ಷಿ ವಹಿವಾಟು ನಡೆಸಲು ಸರ್ವಾನುಮತದಿಂದ ತಿರ್ಮಾನಿಸಲಾಗಿತ್ತು.
ಶನಿವಾರ (ಆ.1) ನಡೆದ ಆನಲೈನ್ ಮಾರುಕಟ್ಟೆ ಪ್ರಕ್ರಿಯೆಯಲ್ಲಿ 4,59 ಲಕ್ಷ ಕೆ.ಜಿ ಒಣದ್ರಾಕ್ಷಿ ವಹಿವಾಟು ನಡೆದಿದ್ದು, ಇದಕ್ಕೂ ಮೊದಲೂ ಕೇವಲ 2.17 ಲಕ್ಷ ಕೆ.ಜಿ ವಹಿವಾಟು ದಾಖಲಾಗಿತ್ತು. ದರದಲ್ಲಿಯೂ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ ಒಣದ್ರಾಕ್ಷಿ ಗರಿಷ್ಠ ₹390ರ ವರೆಗೆ ಮಾರಾಟವಾಗಿದೆ. ಈ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ ಭಾಗವಹಿಸುತ್ತಿದ್ದ ಖರೀದಿದಾರರ ಸಂಖ್ಯೆ 14 ರಿಂದ 25ಕ್ಕೆ ಹೆಚ್ಚಳವಾಗಿದೆ. ದಲ್ಲಾಳಿಗಳ ಸಂಖ್ಯೆ 5 ರಿಂದ 15ಕ್ಕೆ ಅಧಿಕವಾಗಿದೆ. ಈ ಬೆಳವಣಿಗೆಯಿಂದ ರೈತರಿಗೆ ಈವರೆಗೆ ಆಗುತ್ತಿದ್ದ ತೂಕದಲ್ಲಿ ಮೋಸ, ಬೆಲೆಯಲ್ಲಿ ವ್ಯತ್ಯಾಸ, ಆಕ್ಷನ್ ನೆಪದಲ್ಲಿ ತೂರಾಟ ನಡೆಸಿ ಅನಾವಶ್ಯಕವಾಗಿ ಉತ್ಪನ್ನ ಹಾಳಾಗುತ್ತಿರುವುದು ತಪ್ಪಿದಂತಾಗಿದೆ.ಖಾಸಗಿಯವರು ನಡೆಸುತ್ತಿದ್ದ ಬಹಿರಂಗ ಹರಾಜಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ಆಗುತ್ತಿರುವುದರಿಂದ ಯಾವುದೇ ನಿಖರವಾದ ಮಾಹಿತಿ ದೊರೆಯದೇ, ಸರ್ಕಾರಕ್ಕೆ ಸೆಸ್ ಮತ್ತು ಜಿಎಸ್.ಟಿ ಮೂಲಕ ಬರಬೇಕಿದ್ದ ಆದಾಯ ಸಹ ಕೈ ತಪ್ಪುತ್ತಿತ್ತು. ಈಗ ಆನ್ ಲೈನ್ ಮಾರುಕಟ್ಟೆಯಲ್ಲೇ ಹೆಚ್ಚಿನ ವಹಿವಾಟು ನಡೆಯುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿದು ಬರಲಿದೆ. ಎಲ್ಲ ದ್ರಾಕ್ಷಿ ಬೆಳೆಯುವ ರೈತರು ಯಾರ ಲಾಭಿಗೂ ಮಣಿಯದೇ ನಿರಾಂತಕವಾಗಿ ದೊರೆತ ಇಂತಹ ಅವಕಾಶವನ್ನು ಹೆಚ್ಚು ಜನರಿಗೆ ಪ್ರಚುರಪಡಿಸಿ, ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದಲ್ಲಿ ಇಲಾಖೆಗೂ ಆದಾಯ ಮತ್ತು ರೈತರಿಗೂ ಅತೀ ಹೆಚ್ಚು ಲಾಭ ದೊರೆಯಲಿದೆ. ದೇಶದ ಯಾವುದೇ ರಾಜ್ಯದ ವರ್ತಕರು ಆನಲೈನ್ ಮತ್ತು ತಾತ್ಕಾಲಿಕವಾಗಿ ನಡೆಯುವ ಆಪ್ ಲೈನ್ ಮಾರುಕಟ್ಟೆ ವಹಿವಾಟಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.