ಕನ್ನಡಪ್ರಭ ವಾರ್ತೆ ಬೆಳಗಾವಿ ಮನುಷ್ಯ ತನ್ನೊಳಗಿನ ಆನಂದ ಹಾಗೂ ಈಶ್ವರ ಸ್ವರೂಪವನ್ನು ಮರೆತು ಹೊರ ಜಗತ್ತಿನಲ್ಲಿ ಸಂತೋಷ ಹುಡುಕುತ್ತಿದ್ದಾನೆ. ಜ್ಞಾನ ಹಾಗೂ ವಿವೇಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಕೃತಜ್ಞತೆಯ ಭಾವ ಬೆಳೆಸಿಕೊಂಡರೆ ಯಶಸ್ವಿ ಜೀವನ ನಡೆಸಬಹುದು ಎಂದು ಜೀವನ ವಿದ್ಯಾ ಮಿಷನ್‌ನ ಪ್ರಲ್ಹಾದ್ ವಾಮನರಾವ್ ಪೈ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮನುಷ್ಯ ತನ್ನೊಳಗಿನ ಆನಂದ ಹಾಗೂ ಈಶ್ವರ ಸ್ವರೂಪವನ್ನು ಮರೆತು ಹೊರ ಜಗತ್ತಿನಲ್ಲಿ ಸಂತೋಷ ಹುಡುಕುತ್ತಿದ್ದಾನೆ. ಜ್ಞಾನ ಹಾಗೂ ವಿವೇಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಕೃತಜ್ಞತೆಯ ಭಾವ ಬೆಳೆಸಿಕೊಂಡರೆ ಯಶಸ್ವಿ ಜೀವನ ನಡೆಸಬಹುದು ಎಂದು ಜೀವನ ವಿದ್ಯಾ ಮಿಷನ್‌ನ ಪ್ರಲ್ಹಾದ್ ವಾಮನರಾವ್ ಪೈ ಹೇಳಿದರು.ನಗರದ ಮರಾಠಾ ಮಂದಿರ ಸಭಾಂಗಣದಲ್ಲಿ ಭಾನುವಾರ ಜೀವನ ವಿದ್ಯಾ ಮಿಷನ್, ಜ್ಞಾನ ಸಾಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಗುರುಪೂರ್ಣಿಮಾ ಮಹೋತ್ಸವ-2026 ಹಾಗೂ ಕೃತಜ್ಞತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕೃತಜ್ಞತೆಯೇ ನಿಜವಾದ ಉಪಾಸನೆ ವಿಷಯದ ಕುರಿತು ಮಾತನಾಡಿದ ಅವರು, ಜೀವನವು ಕೃತಜ್ಞತೆಯ ಆಧಾರದ ಮೇಲೆ ನಿರ್ಮಾಣವಾಗಬೇಕು. ಕೃತಜ್ಞತೆ ದೇವರ ಸಮೀಪಕ್ಕೆ ಕರೆದೊಯ್ಯುವ ಭಾವನೆ. ಹೀಗಾಗಿ ಕೃತಜ್ಞತೆ ಮನದಲ್ಲಿ, ಸಮೃದ್ಧಿ ಜೀವನದಲ್ಲಿ ಎಂಬುದನ್ನು ಯಶಸ್ವಿ ಜೀವನದ ಮಂತ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧಿಕಾರ, ಸಂಪತ್ತು ಹಾಗೂ ಹುದ್ದೆ ದೊರೆತಾಗ ಮನುಷ್ಯನಲ್ಲಿ ಅಹಂಕಾರ ಹೆಚ್ಚಾಗುತ್ತದೆ. ಅದೇ ಅಹಂಕಾರ ಅವನ ಅವನತಿಗೆ ಕಾರಣವಾಗುತ್ತದೆ. ಆದ್ದರಿಂದ ಆನಂದವನ್ನು ಹಂಚಿಕೊಂಡು, ಇತರರ ಸಂತೋಷದಲ್ಲೂ ಪಾಲ್ಗೊಳ್ಳಬೇಕು. ಕೊಡುವುದರಿಂದ ಜೀವನದಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಎಂಬುದಕ್ಕೆ ಅಮೆರಿಕದ ಉದ್ಯಮಿ ಜಾನ್ ಡಿ.ರಾಕ್‌ಫೆಲರ್ ಅವರ ಜೀವನವನ್ನು ಉದಾಹರಣೆಯಾಗಿ ನೀಡಿದರು. ದಾನ ಧರ್ಮದ ಮಾರ್ಗ ಅಳವಡಿಸಿಕೊಂಡ ಬಳಿಕ ಅವರು ಸಂತೋಷದಿಂದ ದೀರ್ಘಕಾಲ ಜೀವನ ನಡೆಸಿದರು ಎಂದು ತಿಳಿಸಿದರು.4 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವನ ವಿದ್ಯಾ ಮಿಷನ್‌ನ 28 ಉಪಕೇಂದ್ರಗಳಿದ್ದು, ಭಾನುವಾರದ ಕಾರ್ಯಕ್ರಮದಲ್ಲಿ ಸುಮಾರು 4 ಸಾವಿರ ಮಂದಿ ಪಾಲ್ಗೊಂಡಿದ್ದರು. ಬೆಳಗ್ಗೆ ಹರಿಪಾಠದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಸಂಗೀತ ಜೀವನ ವಿದ್ಯಾ ಕಾರ್ಯಕ್ರಮ, ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ನೃತ್ಯ ಹಾಗೂ ಗೀತೆಗಳ ಪ್ರದರ್ಶನ ನಡೆಯಿತು. 11 ದಂಪತಿಗಳ ಮೂಲಕ ಸದ್ಗುರುಗಳ ಭಾವಚಿತ್ರಕ್ಕೆ ಗುರುಪೂಜೆ ನೆರವೇರಿಸಲಾಯಿತು. ಮಿಷನ್‌ನ ಬೆಳಗಾವಿ ಶಾಖೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವ ಗಣ್ಯರನ್ನು ಪ್ರಲ್ಹಾದ್ ಪೈ ಸನ್ಮಾನಿಸಿದರು.ಮರಾಠಾ ಮಂದಿರದ ಆವರಣದಲ್ಲಿ ದಿನವಿಡೀ ಭಕ್ತಿ, ಆನಂದ ಹಾಗೂ ಉತ್ಸಾಹದ ವಾತಾವರಣ ಕಂಡುಬಂತು. ಸದ್ಗುರುಗಳು ನೀಡಿರುವ ವಿಶ್ವಪ್ರಾರ್ಥನೆ ಹಾಗೂ ಪ್ರತಿಯೊಂದು ಕ್ರಿಯೆಯೂ ರಾಷ್ಟ್ರಹಿತಕ್ಕಾಗಿ, ವಿಶ್ವಶಾಂತಿಗಾಗಿ ಎಂಬ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಪಠಿಸಲಾಯಿತು. ಪ್ರವಚನಕಾರ ಶಂಕರರಾವ್ ಬಾಂದಕರ, ಬೆಳಗಾವಿ ಶಾಖೆ ಅಧ್ಯಕ್ಷ ಶೈಲೇಶ್ ಶಿರೋಡಕರ, ಕಾರ್ಯದರ್ಶಿ ಸತೀಶ್ ಬೇಕವಾಡಕರ, ಖಜಾಂಚಿ ದೀಪಕ್ ಬಿರ್ಜೆ, ಸಲಹೆಗಾರ ಪ್ರಭಾಕರ ದೇಸಾಯಿ, ಆಂತರಿಕ ಲೆಕ್ಕಪರಿಶೋಧಕ ತಾನಾಜಿ ಪಾಟೀಲ, ಮುಂಬೈನ ಪಾಲಕ ಟ್ರಸ್ಟಿ ವಿಲಾಸ್ ಪರಬ್ ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸೋಮವಾರ ಮರಾಠಾ ಮಂಡಳ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನಾತ್ಮಕ ಉಪನ್ಯಾಸ ಆಯೋಜಿಸಲಾಗಿದೆ. ಮಧುರಾ ಶಿರೋಡಕರ ಹಾಗೂ ಪ್ರಶಾಂತ್ ಬಿರ್ಜೆ ನಿರೂಪಿಸಿದರು.
ಬಾಕ್ಸ್350ಕ್ಕೂ ಹೆಚ್ಚು ಅಂಗಾಂಗ ದಾನ ಅರ್ಜಿಅಂಗಾಂಗ ದಾನಕ್ಕೆ ಜೀವನ ವಿದ್ಯಾ ಮಿಷನ್ ನೀಡಿದ ಕರೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 350ಕ್ಕೂ ಹೆಚ್ಚು ಮಂದಿ ಅಂಗಾಂಗ ದಾನಕ್ಕೆ ಅರ್ಜಿ ಸಲ್ಲಿಸಿದರು. ಮಿಷನ್ ವತಿಯಿಂದ ಅಂಗಾಂಗ ದಾನ ಹಾಗೂ ರಕ್ತದಾನ ಶಿಬಿರಗಳನ್ನು ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಈ ಸಾಮಾಜಿಕ ಸೇವಾ ಕಾರ್ಯದ ಹಿನ್ನೆಲೆಯಲ್ಲಿ ಪ್ರೀತಿ ದೊಡವಾಡ ಹಾಗೂ ಡಾ.ಮಾಧವ ಪ್ರಭು ಅವರಿಂದ ಪ್ರಲ್ಹಾದ್ ಪೈ ಅವರನ್ನು ಸನ್ಮಾನಿಸಲಾಯಿತು.