ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಭಾನುವಾರ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮುಂಗಾರು ಮಳೆ ಕೊರತೆಯಿಂದಾಗಿ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಗರದಲ್ಲಿ ಅಗತ್ಯ ಕುಡಿಯುವ ನೀರನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಂಡು ನಿಯಮಿತ ತೆರಿಗೆ ವಸೂಲಿ ಹಾಗೂ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಭಾನುವಾರ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಕ್ಕೆ ಸರಬರಾಜು ಮಾಡುವ ಕುಡಿಯುವ ನೀರು ಸ್ವಚ್ಛ ಹಾಗೂ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಮುಂಗಾರು ಮಳೆ ಕೊರತೆಯಾದ ಹಿನ್ನೆಲೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಅಗತ್ಯ ಯೋಜನೆ ರೂಪಿಸಬೇಕು. ಕುಡಿಯುವ ನೀರು ಸಮಸ್ಯೆ ಉಲ್ಬಣಿಸದಂತೆ ಅಗತ್ಯ ಪೂರ್ವ ಯೋಜನೆ ಮಾಡಿಕೊಳ್ಳಬೇಕು. ನಿಯಮಿತವಾಗಿ ನೀರು ಸರಬರಾಜು ಮಾಡಬೇಕು. 3ನೇ ಹಂತದಲ್ಲಿ ನಗರದ ಜನತೆಗೆ ನಿತ್ಯ ನೀರು ಪೂರೈಸಲು, ತಕ್ಷಣ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಅವರು, ಪ್ರತಿ ಮನೆ-ಮನೆಗೂ ಮೀಟರ್ ಅಳವಡಿಸಲು ತಿಳಿಸಿದರು. ಸ್ವಚ್ಛತೆಗೆ ಸಂಬಂಧಿಸಿದಂತೆ ಹಸಿ ಮತ್ತು ಒಣ ಕಸವನ್ನು ಪ್ರತಿ ಮನೆಯಿಂದಲೇ ಪ್ರತ್ಯೇಕವಾಗಿ ವಿಂಗಡಣೆಯಾಗಬೇಕು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಆ ನಗರದಲ್ಲಿ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಬೇಕು, ಪ್ರತ್ಯೇಕವಾಗಿ ಸಂಗ್ರಹಿಸಲಾದ ಕಸವನ್ನು ಸಂಸ್ಕರಣ ಮಾಡಬೇಕು. ಇದಕ್ಕೆ ಅಗತ್ಯವಾದ ಯಂತ್ರೋಪಕರಣ ಖರೀದಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಆಸ್ತಿಗೆ ಸಂಬಂಧಿಸಿದಂತೆ ಜೆಐಎಸ್ ಮತ್ತು ಜೆಪಿಎಸ್ ಗೆ ಪ್ರತ್ಯೇಕ ಡಾಟಾ ಸಂಗ್ರಹಿಸಬೇಕು. ಜನ ತೆರಿಗೆ ಕಟ್ಟುವುದನ್ನು ಕ್ರಾಸ್ ಚೆಕ್ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ನಗರದಲ್ಲಿ ಪ್ರವಾಹ ಉಂಟಾದಾಗ ರಸ್ತೆ ಹಾಳಾಗದಂತೆ ಕ್ರಮ ಕೈಗೊಳ್ಳಬೇಕು, ನಗರದಲ್ಲಿನ ರಸ್ತೆ, ಚರಂಡಿ ಹಾಗೂ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳ ಬಗ್ಗೆ ವಿಶೇಷ ಗಮನಹರಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಮೃತ್ ಯೋಜನೆ 1.0 ಮತ್ತು 2.0 ಕಾಮಗಾರಿಗಳ ಪ್ರಗತಿ ಕುರಿತು ಸಚಿವರು ಸಭೆಯಲ್ಲಿ ಮಾಹಿತಿ ಪಡೆದರು. ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಹಾಗೂ ಪ್ರಸ್ತುತ ಸ್ಥಿತಿಗತಿಯ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು, ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
2026-27ನೇ ಸಾಲಿನ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ಉದ್ಯಮ ಪರವಾನಗಿ ಶುಲ್ಕ ಹಾಗೂ ನೀರಿನ ಬಳಕೆ ಶುಲ್ಕ ವಸೂಲಾತಿಯ ಪ್ರಗತಿ ಕುರಿತು ಮಾಹಿತಿ ಪಡೆದರು. ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳು ಹಾಗೂ ಅಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ವ್ಯವಸ್ಥೆಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರದ ಅಭಿವೃದ್ಧಿಗೆ ಸಂಬಂಧಿಸಿದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ 2.0 ಹಾಗೂ ಎಸ್‌ಎಫ್‌ಸಿ ನಿಧಿಯಡಿ ಕೈಗೊಳ್ಳಲಾಗಿರುವ ಮತ್ತು ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಸಮಗ್ರ ಮಾಹಿತಿ ಪಡೆದರು.ಮೂರನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೆ ಕ್ರಮ:
ಸಚಿವ ಡಾ.ಎಂ.ಬಿ.ಪಾಟೀಲ ಮಾತನಾಡಿ, 3ನೇ ಹಂತದ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಬೇಕು. ಅದನ್ನು ಮಾಡಿದರೆ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಶಾಶ್ವತವಾಗಿ ಹೆಸರು ಉಳಿಯಲಿದೆ ಎಂದು ಸಚಿವರ ಗಮನ ಸೆಳೆದರು. ನಮ್ಮಲ್ಲಿ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಆದರೂ ನಗರದ ಜನತೆಗೆ ಒಂದು ವಾರ ಇಲ್ಲವೇ ಎರಡು ವಾರಕ್ಕೊಮ್ಮೆ ನೀರು ಪೂರೈಸುತ್ತಿದ್ದೇವೆ. ಪ್ರಸ್ತುತ ಭೂತನಾಳ ಕೆರೆಯಿಂದ ನಾಲ್ಕು ವಾರ್ಡ್ ಗಳಿಗೆ ಮಾತ್ರ ನೀರು ಪೂರೈಸುತ್ತಿದ್ದೇವೆ. ಹಾಗಾಗಿ ನಗರದ ಜನತೆಗೆ ನಿತ್ಯ ಕುಡಿಯುವ ನೀರು ಪೂರೈಸಲು ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಿ, ಅದನ್ನು ಕಾರ್ಯಗತಗೊಳಿಸಿದರೆ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದರು.ಈ ನಿಟ್ವಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮುಖ್ಯಮಂತ್ರಿ ಅವರ ಗಮನಸೆಳೆಯುವೆ. ಅದಕ್ಕೆ ಸಚಿವರು ಸ್ಪಂದಿಸುವ ಮೂಲಕ ವಿಜಯಪುರ ನಗರಕ್ಕೆ ಮೂರನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು. ಆದಾಗ್ಯೂ ನಾವು ನಗರದ ಜನರಿಗೆ ನಿರಂತರ ಹಾಗೂ ಸಮರ್ಪಕ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಆಸ್ತಿ ತೆರಿಗೆ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆ ಸೇರಿದಂತೆ ವಿವಿಧ ಮೂಲಗಳಿಂದ ಆದಾಯ ಸಂಗ್ರಹಣೆ, ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2.0, 15ನೇ ಹಣಕಾಸು ಆಯೋಗದ ಯೋಜನೆ, ಅಮೃತ್-2.0 ಯೋಜನೆ, ಘನ ತ್ಯಾಜ್ಯ ವಸ್ತು ನಿರ್ವಹಣೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಇ-ಖಾತಾ, ಸಕಾಲ ಹಾಗೂ ಐಪಿಜಿಆರ್‌ಎಸ್ ಹಾಗೂ ಖಾಲಿ ಹುದ್ದೆಗಳ ಮಾಹಿತಿ ಸೇರಿದಂತೆ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಹಾಗೂ ಅನುಷ್ಠಾನದ ಕುರಿತು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಉಪಮೇಯರ್ ಸುಮಿತ್ರಾ ಜಾಧವ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.