ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರಕಾಂಗ್ರೆಸ್ ಬಿಡುಗಡೆ ಮಾಡಿದ ಗ್ಯಾರಂಟಿ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಪ್ರಣಾಳಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಎಲ್ಲಿಯಾದರೂ ಮುಸ್ಲಿಮರಿಗೆ ಸಂಬಂಧಿಸಿದ ಶಬ್ದ ಇದೆಯೇ ಎಂಬುದನ್ನು ಬಿಜೆಪಿಯವರು ಸರಿಯಾಗಿ ನೋಡಬೇಕು. ಗೌರವಯುತ ಪ್ರಧಾನಿ ಸ್ಥಾನದಲ್ಲಿರುವ ಮೋದಿ ಅವರು ಈ ರೀತಿ ಸುಳ್ಳು ಹೇಳುವುದು ಅವರಿಗೆ ಶೋಭೆಯಲ್ಲ. ಸುಳ್ಳು ಹೇಳುವುದಕ್ಕೆ ಪ್ರಶಸ್ತಿ ಇದ್ದರೆ ಅದನ್ನು ಮೋದಿಗೆ ಕೊಡಬೇಕು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ಹರಿಹಾಯ್ದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಲೀಗ್ ಎಂದರೆ ಏನು ಎಂಬುದನ್ನು ಇವರು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಲೀಗ್‌ನ ಅನೇಕರು ಪ್ರಾಣತ್ಯಾಗ ಮಾಡಿದ್ದು, ಮುಸ್ಲಿಂ ಲೀಗ್ ಜೊತೆ ಆಗಿನ ಜನಸಂಘದವರು ಸೇರಿ ಸರ್ಕಾರ ಮಾಡಿದ್ದರು ಎಂದು ಆರೋಪಿಸಿದರು.ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರಿಗೆ ಮಾತನಾಡಲು ಬೇರೆ ವಿಚಾರಗಳಿಲ್ಲ. ಇಡಿ ಮೋದಿ ತಂಡ ಇದೀಗ ಹತಾಶವಾಗಿದ್ದು, ಕಾಂಗ್ರೆಸ್ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ದೇಶದ ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡುವುದು, ಬಂಡವಾಳ ಶಾಹಿಗಳ ಸಾಲಮನ್ನಾ ಮಾಡುವುದು, ಇಂತಹವುಗಳೇ ಇವರ ದೂರದೃಷ್ಟಿಯಾಗಿದೆ. ಬಡವರು ಬಡವರಾಗಿಯೇ ಇರಬೇಕು ಎಂಬ ಉದ್ದೇಶ ಇವರದ್ದಾಗಿದೆ. ನರೇಂದ್ರ ಮೋದಿ ಸಿಎಂ ಆಗಿದ್ದಾಗ ಗುಜರಾತನಲ್ಲಿ ಗೌತಮ್ ಅದಾನಿ ಜೊತೆಗೆ ಇದ್ದ, ಕೇವಲ 20 ವರ್ಷಗಳಲ್ಲಿ ಆತ ಜಗತ್ತಿನ ನಂಬರ್ ಒನ್ ಶ್ರೀಮಂತ ಆಗುತ್ತಾನೆ ಎಂದರೆ ಆತನಿಗೆ ಎಷ್ಟು ಸಪೋರ್ಟ್ ಮಾಡಿರಬೇಕು ಎಂದು ಪ್ರಶ್ನಿಸಿದರು.
ದೇಶದ ಸಂವಿಧಾನ ಬದಲಾಯಿಸುವುದು, ಸಾಂವಿಧಾನಿಕ ಹುದ್ದೆಗಳನ್ನು ದುರ್ಬಲಗೊಳಿಸುವುದು ಮುಂತಾದ ದುರುದ್ದೇಶಗಳೇ ಬಿಜೆಪಿಯ ಅಜೆಂಡಾ ಆಗಿದೆ. ಅವರು ಮಾಡಿದ ಸಾಧನೆ ಬಗ್ಗೆ ಹೇಳುವ ಬದಲು ಕಾಂಗ್ರೆಸ್ ಬಗ್ಗೆ ಸುಳ್ಳು ಹೇಳಿ, ಹಿಂದುತ್ವದ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿದ್ದು, ಕೊರೋನಾದಲ್ಲಿ ಬಡವರಿಗೆ ಸಹಾಯ ಮಾಡದಿರುವುದೇ ಇವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.ಯತ್ನಾಳ ವಿರುದ್ಧ ಕಿಡಿ:
ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಒಡಕುಬಾಯಿ ಶಾಸಕ ಎಂದು ಕರೆದ ಗಣಿಹಾರ, ಕಾಂಗ್ರೆಸ್‌ನವರು ಕೇವಲ ಅಲ್ಪಸಂಖ್ಯಾತರ ಜಪ ಮಾಡುತ್ತಾರೆಂದು ಆರೋಪ ಮಾಡುವ ಮೊದಲು ಅವರು ಮೇಲೆ ಬಂದಿದ್ದೇ ಅಲ್ಪಸಂಖ್ಯಾತರಿಂದ ಎಂಬುದನ್ನು ಮರೆಯಬಾರದು ಎಂದರು.ಹಿಂದುತ್ವದ ರಕ್ಷಣೆ, ದೇಶದ ಭದ್ರತೆಗೆ ಮೋದಿಗೆ ವೋಟು ಹಾಕಿ ಎನ್ನುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ರಕ್ಷಣೆ ಇಲ್ಲವಾ? ನೀವೇನು ಮಾಡಿದ್ದೀರಿ ? ಮಣಿಪುರದ ಸಹೋದರಿಯರಿಗೆ ಬೆತ್ತಲೆ ಮೆರವಣಿಗೆ ಮಾಡಿಸಿದರು, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಯಿತು. ಅದರ ಬಗ್ಗೆ ಯಾಕೆ ವಿರೋಧ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ವಿಜಯಪುರ ಹಾಗೂ ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರು ಯಾರು ಎಂಬುದು ಗೊತ್ತಿಲ್ಲವೆ? ಹಿಂದುಗಳ ಮೇಲೆ ಪ್ರೀತಿ ಇದ್ದರೆ, ಜಾತಿ ಕಾಲಂನಲ್ಲಿ ಹಿಂದು ತೆಗೆದು ಕೇವಲ ಲಿಂಗಾಯತ ಎಂದು ಬರೆಸಿ ಎಂದು ಹೇಳಿದ್ಧೀರಿ. ಆಗ ಹಿಂದು ಶಬ್ದವನ್ನೇ ಬಿಡೋಕೆ ಹೇಳಿದ್ದೀರಿ, ಆವಾಗ ಎಲ್ಲಿ ಹೋಗಿತ್ತು ನಿಮ್ಮ ಹಿಂದು ಪ್ರೇಮ ಎಂದು ಪ್ರಶ್ನಿಸಿದರು.ಕೆಪಿಸಿಸಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರವಿ ಬಿರಾದಾರ ಮಾತನಾಡಿ, ಧರ್ಮವನ್ನು ರಾಜಕಾರಣಕ್ಕೆ, ವ್ಯಾಪಾರಕ್ಕಾಗಿ, ಮತಗಳಿಗಾಗಿ ಬಳಸಿಕೊಂಡಿದ್ದು ಮೋದಿ ಸರ್ಕಾರ ಎಂದು ದೂರಿದರು.
ರಾಮ ಮಂದಿರ ಪೂರ್ಣವಾಗಲು ಇನ್ನೂ ಎರಡು ವರ್ಷ ಬೇಕು. ಆದರೆ ತರಾತುರಿಯಲ್ಲಿ ಲೋಕಾರ್ಪಣೆ ಮಾಡಿ ರಾಮ ಮಂದಿರವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಮುಸ್ಲಿಂ ಪರವಾಗಿವೆ ಎಂದು ಹೇಳಿರುವುದು ಪ್ರಧಾನಿ ಸ್ಥಾನದ ಗೌರವಕ್ಕೆ ಧಕ್ಕೆ ತರುತ್ತದೆ. ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯೊಬ್ಬ ನಾಗರಿಕರಿಗೂ ಅನ್ವಯವಾಗುವಂತೆ ಇದೆ. ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಧಾರ್ಮಿಕವಾಗಿ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಅಗ್ನಿವೀರ ಹೆಸರಲ್ಲಿ ಸೇನೆಯಲ್ಲಿ ನಾಲ್ಕು ವರ್ಷ ದುಡಿಸಿಕೊಂಡು ವಾಪಸ್ ಕಳಿಸುವ ಮೂಲಕ ಯುವಕರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ವಿರೋಧಿಗಳ ವಿರುದ್ಧ ಐಟಿ, ಇಡಿ ರೇಡ್:
ಬಿಜೆಪಿಯ ವಿರುದ್ಧ ಯಾರಾದರೂ ನಿಂತರೆ ಅವರ ಮೇಲೆ ಐಟಿ, ಇಡಿ ರೇಡ್ ಮಾಡಿಸುವ ಮೂಲಕ ವಿರೋಧ ಪಕ್ಷಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಅದೇ ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿಜಿಪಿಯವರ ಮೇಲೆ ಯಾಕೆ ರೇಡ್ ಆಗಿಲ್ಲ ?. ಇದೆಲ್ಲವನ್ನು ಅರಿತು ಜನರು ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು, ಕಾಂಗ್ರೆಸ್ ಗೆ ಬಹುಮತ ನೀಡಬೇಕೆಂದು ಮನವಿ ಮಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))