ಕನ್ನಡಪ್ರಭ ವಾರ್ತೆ ಮದ್ದೂರು
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಏ.25 ರಿಂದ ಮೇ 6ರವರೆಗೆ ಮದ್ದೂರು ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರವಾಸಿ ಮಂದಿರ ಆವರಣದಿಂದ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದವರೆಗೆ ಮ್ಯಾರಥಾನ್ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದರು.
ಏ.25 ರಿಂದ 30ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. ಉತ್ತಮ ರಾಸುಗಳನ್ನು ಚಾಂಪಿಯನ್ ಎಂದು ಘೋಷಿಸಿ ಕ್ರಮವಾಗಿ ಮೊದಲ ಸ್ಥಾನ 2 ಲಕ್ಷ ರು., ದ್ವೀತಿಯ 1 ಲಕ್ಷ ರು. ಮೂರನೇ ಸ್ಥಾನ 50 ಸಾವಿರ ರು. ಬಹುಮಾನ ಅಲ್ಲದೇ 10 ರಾಸುಗಳಿಗೆ 10 ಸಾವಿರ ರು. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಹೇಳಿದರು.ಇದೇ ಮೊದಲ ಬಾರಿ ಉತ್ಸವ ಪಾಲ್ಗೊಳ್ಳುವ ಟಗರುಗಳಿಗೂ ಕೂಡ ಕ್ರಮವಾಗಿ 10 ಸಾವಿರ ಹಾಗೂ 5 ಸಾವಿರ ನಗದು ಬಹುಮಾನ, ಬಹುಮಾನ ವಿಜೇತ ರಾಸುಗಳನ್ನು ಏ.30 ರಂದು ಮದ್ದೂರು ಪ್ರವಾಸಿ ಮಂದಿರ ಆವರಣದಿಂದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದ ಆವರಣದವರೆಗೆ ಮೆರವಣಿಗೆ ಮೂಲಕ ಕರೆತಂದು ಬಹುಮಾನ ನೀಡಿ ಗೌರವಿಸಲಾಗುವುದು. ಭಾಗವಹಿಸುವರು ಶಿವಪುರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ರೈತರು ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಮದ್ದೂರು ಕ್ಷೇತ್ರ ವ್ಯಾಪ್ತಿಯ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರಿಗೆ ಏ.28,29 ರಂದು ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಪಟ್ಟಣದ ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಆಸಕ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ವಿಜೇತ ತಂಡಗಳಿಗೆ ಕ್ರಮವಾಗಿ 50 ಸಾವಿರ ರು., 25 ಸಾವಿರ ರು., 10 ಸಾವಿರ ನಗದು ಬಹುಮಾನ ನೀಡಲಾಗುವುದು. ಜೊತೆಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಮೇ 1 ರಿಂದ 4 ರವರೆಗೆ ಪಟ್ಟಣದ ನಿವಾಸಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಪ್ರತೀ ವಾರ್ಡ್ ಮಟ್ಟದಲ್ಲಿ ನಡೆಯಲಿದೆ. ವಿಜೇತ ಮಹಿಳೆಯರಿಗೆ ಮಿಕ್ಸಿ, ಕುಕ್ಕರ್, ಬಿಸಿ ನೀರು ಜಗ್ಗು ಬಹುಮಾನವಾಗಿ ನೀಡಲಾಗುವುದು. ವಿಜೇತರಾದ ಮಹಿಳೆಯರಿಗೆ ಮತ್ತೊಮ್ಮೆ ಸ್ಪರ್ಧೆ ಆಯೋಜಿಸಿ ವಾಷಿಂಗ್ ಮಷಿನ್, ರೆಪ್ರಿಜರೇಟರ್, ಗ್ರೈಂಡರ್ ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಪರ್ಧೆಯ ಉಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಮೇ 6 ರಂದು ಮದ್ದೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಆಯೋಜಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಖ್ಯಾತ ಚಲನಚಿತ್ರ ನಟ ನಟಿಯರು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಪಾಪ್ ಗಾಯಕ ಚಂದನ್ ಶೆಟ್ಟಿ, ನವೀನ್ ಸಜ್ಜು ತಂಡದವರಿಂದ ರಸ ಮಂಜರಿ ನಡೆಯಲಿದೆ. ಹಿರಿಯ ಚಿತ್ರನಟರಾದ ವಿ.ರವಿಚಂದ್ರನ್, ಸಾಧುಕೋಕಿಲಾ, ಗಣೇಶ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು. ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಸರ್ವಮಂಗಳಾ, ಸಿದ್ದರಾಜು, ಬಸವರಾಜು, ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಮಮತಾ ಶಂಕರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ಸಿದ್ದರಾಮಣ್ಣ, ಚನ್ನೇಗೌಡನದೊಡ್ಡಿ ಹೊಂಬಯ್ಯ, ಮರಿದೇವರು, ಎಂ.ಸಿ.ಲಿಂಗರಾಜು, ಇಮ್ತಿಯಾಜ್ ಉಲ್ಲಾ ಖಾನ್, ಎಂ.ಎಲ್.ಸಂತೋಷ್, ಡಿ.ಸಿ.ರಾಜು, ರವಿ, ಅರುಣ್‌ಕುಮಾರ್, ವೆಂಕಟೇಶ್, ಇದ್ದರು.