ಮಹಿಳೆಯರಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ

| Published : Nov 12 2025, 01:00 AM IST

ಸಾರಾಂಶ

ಹೆಣ್ಣು ಮಕ್ಕಳು ಸಾಧನೆ ಹಾದಿಯಲ್ಲಿ ಸಾಗಬೇಕು. ಯಾರಿಗೂ ಹೆದರದೇ, ಗುರಿಗಳನ್ನು ಇರಿಸಿಕೊಂಡು ಮುನ್ನುಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳೆಯರಿಂದ ದೇಶದ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ನಟ ಝೈದ್ ಖಾನ್ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ ಕ್ರಾಸ್, ಎನ್ ಸಿಸಿ ರೇಂಜರ್ಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳು ಸಾಧನೆ ಹಾದಿಯಲ್ಲಿ ಸಾಗಬೇಕು. ಯಾರಿಗೂ ಹೆದರದೇ, ಗುರಿಗಳನ್ನು ಇರಿಸಿಕೊಂಡು ಮುನ್ನುಗಬೇಕು. ಬದುಕಿನಲ್ಲಿ ಅಸಾಧ್ಯವಾಗಿರುವುದು ಯಾವುದೂ ಇಲ್ಲ. ಹೆಣ್ಣು ದೇವರಿಗೆ ಸಮಾನಳು. ಆಕೆಯಿಂದ ಈ ಸೃಷ್ಟಿ ಇಂದಿಗೂ ಜೀವಂತವಾಗಿದೆ ಎಂದು ಅವರು ಹೇಳಿದರು.

ದೇಶದ ಭವಿಷ್ಯವೇ ಯುವಸಮೂಹದಲ್ಲಿ ಅಡಗಿದೆ. ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ಮೂಲಕ ಪೋಷಕರಿಗೆ, ಅಧ್ಯಾಪಕರು ಹೆಮ್ಮೆ, ಗೌರವ ತರಬೇಕು ಎಂದು ಅವರು ಕರೆ ನೀಡಿದರು.

ಇದೇ ವೇಳೆ ಬನಾರಸ್ ಚಿತ್ರದ ಹಾಡಿಗೆ ಝೈದ್ ಖಾನ್ ಹೆಜ್ಜೆ ಹಾಕಿ ವಿದ್ಯಾರ್ಥಿನಿಯರನ್ನು ರಂಜಿಸಿದರು. ನಂತರ ಗಾಯಕ, ಸಂಗೀತ ಸಂಯೋಜಕ ಅಕ್ಷಯ್ ಅವರು ಹಾಡಿದರು.

ನಟ ನಿರಂಜನ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಬಸವರಾಜು, ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಎಸ್ ಅನಿತಾ, ಐಕ್ಯೂಎಸಿ ಸಂಚಾಲಕಿ ಡಾ. ಪ್ರಿಯಾ ಉತ್ತಯ್ಯ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಡಾ.ಕೆ.ಎಸ್. ಭಾಸ್ಕರ್, ಖಜಾಂಚಿ ಡಾ.ಟಿ. ನಾಗವೇಣಿ, ಪತ್ರಾಂಕಿತ ವ್ಯವಸ್ಥಾಪಕ ಕೆ. ವೆಂಕಟೇಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವೈ. ಹರ್ಷಿತಾ, ಕಾರ್ಯದರ್ಶಿ ಎನ್.ಎಂ. ವೈಷ್ಣವಿ ಮೊದಲಾದವರು ಇದ್ದರು.