ಚಿತ್ರದುರ್ಗ ನಗರದ ಕೋಟೆನಾಡು ಬುದ್ದ ವಿಹಾರ ಧ್ಯಾನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಯನ್ನು ಬಿ.ಪಿ.ತಿಪ್ಪೇಸ್ವಾಮಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶೋಷಿತ ಸಮುದಾಯಗಳಿಗೆ ಅಕ್ಷರ ಪರಿಚಯಿಸಿದ ಮಹಾತಾಯಿ ಸಾವಿತ್ರ ಬಾಪುಲೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಬಣ್ಣಿಸಿದರು.ಚಿತ್ರದುರ್ಗ ನಗರದ ಕೋಟೆನಾಡು ಬುದ್ದ ವಿಹಾರ ಧ್ಯಾನ ಕೇಂದ್ರದಲ್ಲಿ ಭಾನುವಾರ ಗೌತಮ ಬುದ್ದ ಪ್ರತಿಷ್ಟಾನ ಹಾಗೂ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಲಿಕೆ ಮತ್ತು ಜ್ಞಾನದಿಂದ ಮಾತ್ರವೇ ಶೂದ್ರ ಸ್ತ್ರೀಯರಿಗೆ ಹಾಗೂ ಅಸ್ಪೃಶ್ಯರಿಗೆ ಘನತೆ ತಂದು ಕೊಡಬಲ್ಲದು ಎಂದು ಪುಲೆ ಬಲವಾಗಿ ನಂಬಿದ್ದರು. ಶೋಷಿತರ ಎದೆಯಲ್ಲಿ ಅಕ್ಷರದ ಹಣತೆ ಬೆಳಗಿದ ಸಾವಿತ್ರಿ ಬಾಪುಲೆ ಶಿಕ್ಷಣದಲ್ಲಿ ಕ್ರಾಂತಿ ನಡೆಸಿದರು ಎಂದರು.
ವಿಧವೆಯರಿಗೆ ಪುನರ್‌ವಿವಾಹ, ಅವರ ಮಕ್ಕಳಿಗೆ ಶಾಲೆ ತೆರದಾಗ ಅಂದಿನ ಸಮಾಜ ಇವರನ್ನು ತೀವ್ರವಾಗಿ ವಿರೋಧಿಸಿತು. ಆದರೂ ಇವರು ಬ್ರಾಹ್ಮಣ ವಿಧವೆಯ ಮಗು ವನ್ನು ದತ್ತು ಪಡೆದು ಅವನಿಗೆ ಯಶವಂತರಾವ್ ಎಂದು ನಾಮಕರಣ ಮಾಡಿ ಪ್ರೀತಿಯಿಂದ ಬೆಳೆಸಿದರು. ಇವರ ಬದ್ದತೆಯನ್ನು ಮೆಚ್ಚಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತನ್ನ ಮಗನಿಗೂ ಯಶವಂತ್‌ರಾವ್ ಎಂಬ ಹೆಸರಿಡುವ ಮೂಲಕ ಪುಲೆ ದಂಪತಿಗಳಿಗೆ ಗೌರವ ಸಲ್ಲಿಸಿದರು. ಇವರ ಆದರ್ಶದ ಹೋರಾಟ ಗಳನ್ನು ಸಂವಿಧಾನದಲ್ಲಿ ಸೇರಿಸುವ ಮೂಲಕ ಚಿರಸ್ಥಾಯಿಗೊಳಿಸಿದರು ಎಂದರು.ಇಂದಿನ ಪ್ರತಿಯೊಬ್ಬ ವಿದ್ಯಾವಂತ ಮಹಿಳೆ ಯೂ ಸಾವಿತ್ರ ಬಾಯಿ ಅವರ ಬದ್ದತೆ ವೈಚಾರಿಕೆ ಮುನ್ನೋಟವನ್ನು ಅಳವಡಿಸಿ ಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದರು.
ಮಲ್ಲಾಡಿಹಳ್ಳಿ ಪಿಯು ಕಾಲೇಜು ಪ್ರಾಂಶುಪಾಲ ಸಿದ್ದಲಿಂಗಮ್ಮ ಮಾತನಾಡಿ ಎಲ್ಲಾ ವರ್ಗದ ಸ್ತ್ರೀಯರ ಮೇಲೆ ಧರ್ಮ ಮತ್ತು ಆಚರಣೆ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಪ್ಪಿಸಲು ಶಿಕ್ಷಣವು ಒಂದೇ ಮಾರ್ಗವೆಂದು ಆರಿತಿದ್ದರು. ಹಾಗಾಗಿ ಪತಿ ಜ್ಯೋತಿಬಾಪುಲೆ ಹಾಕಿಕೊಟ್ಟ ದಾರಿಯಲ್ಲಿಯೇ ನಡೆದ ಸಾವಿತ್ರಿಪುಲೆ ಅವರು ಮಹಿಳೆಯರಿಗೆ ಶಿಕ್ಷಣ ಕೇಂದ್ರಗಳನ್ನು ತೆರದು ಅಕ್ಷರ ಸಾರ್ವತ್ರೀಕರಣಗೊಳಿಸಿ ಜ್ಞಾನ ಧಾರೆ ಎರೆಯುವ ಮೂಲಕ ಮಹಿಳೆಯರ ಬದುಕಿಗೆ ದಾರಿದೀಪವಾಗಿದ್ದಾರೆ ಎಂದರು.ಅಸ್ಪೃಶ್ಯರಿಗೆ ನೀರು ಕುಡಿಯಲು ಕೊಡದಂತ ಪರಿಸ್ಥಿತಿಯಲ್ಲಿ ಈ ಸಮಾಜದಲ್ಲಿದ್ದಾಗ ಪುಲೆ ದಂಪತಿಗಳು ಅಸ್ಪೃಶ್ಯರಿಗೆ ನೀರು ಕುಡಿಯಲು ತನ್ನ ಮನೆಯಲ್ಲಿಯೇ ಬಾವಿ ತೋಡಿಸಿದ್ದು ಇವರ ಕ್ರಾಂತಿಕಾರಿ ಬದ್ಧತೆಗೆ ಸಾಕ್ಷಿ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆ ದಂತೆ ಎಂದು ಪ್ರತಿಪಾದಿಸಿದ್ದ ಅವರು ಮಕ್ಕಳಿಗೆ ಪಾಠ ಹೇಳಕೊಡಲು ಹೋಗುವಾಗ ಅವರ ಮೇಲೆ ಸಗಣೆ ಎರುಚುತ್ತಿದ್ದರೂ, ಅದನ್ನು ಅವಮಾನವೆಂದು ತಿಳಿದುಕೊಳ್ಳದೇ ಶಿಕ್ಷಣ ನೀಡುವುದೇ ನಮ್ಮ ಗುರಿಯೆಂದು ನಂಬಿದ್ದರು ಎಂದು ಹೇಳಿದರು.
ಬಿಎಸ್ ಐ ಜಿಲ್ಲಾಧ್ಯಕ್ಷ ಪ್ರಕಾಶ್, ಡಾ.ಶ್ರೀಧರ್, ಡಾ.ರಕ್ಷತಾ, ಪಿಲ್ಲಳ್ಳಿ ಹರೀಶ್, ಉಪನ್ಯಾಸಕ ನಾಗೇಂದ್ರಪ್ಪ, ಚಳ್ಳಕೆರೆ ಬಿಎಸ್ಐ ಅಧ್ಯಕ್ಷ ರವಿಕುಮಾರ್ ಮಾತನಾಡಿದರು. ಇಂದೂಧರ್ ಗೌತಮ್, ಬನ್ನಿಕೋಡ್ ರಮೇಶ್, ಬೆಸ್ಕಾಂ ತಿಪ್ಪೇಸ್ವಾಮಿ, ಪ್ರೇಮಾನಂದ ಗೌತಮ್ ಇತರರಿದ್ದರು.